ಮಂಗಳೂರು: ಮಾಜಿ ಶಾಸಕ ಜೆ.ಆರ್.ಲೋಬೊ ತಮ್ಮ ಅವಧಿಯಲ್ಲಿ ಉರ್ವ ಮಾರುಕಟ್ಟೆಯನ್ನು 14 ಕೋಟಿ ರೂ. ಖರ್ಚು ಮಾಡಿ ನಿರ್ಮಿಸಿ ಮಂಗಳೂರು ಮಹಾನಗರ ಪಾಲಿಕೆಗೆ 14 ಕೋಟಿ ರೂ. ಹೊರೆ ಹೊರಿಸಿದ್ದಾರೆ. ಇದನ್ನು ಬಿಜೆಪಿ ಖಂಡಿಸುತ್ತದೆ ಎಂದು ಮಂಗಳೂರು ಮನಪಾ ಸದಸ್ಯ ಸುಧೀರ್ ಕುಮಾರ್ ಶೆಟ್ಟಿ ಹೇಳಿದರು.
ಜೆ.ಆರ್.ಲೋಬೊ ಅವರು ಮೂಡಾದಲ್ಲಿ ಕ್ರೋಢೀಕರಣ ಆಗಿರುವ ಹಣವನ್ನು ಹೇಗಾದರೂ ಖರ್ಚು ಮಾಡಬೇಕು ಅನ್ನುವ ದೃಷ್ಟಿಯಿಂದ ತಾವು ಶಾಸಕರಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ನ ಕುಮ್ಮಕ್ಕಿನಿಂದ ಬಿಜೆಪಿಯ ವಿರೋಧದ ನಡುವೆಯೂ ನಗರದ ಉರ್ವ ಮಾರುಕಟ್ಟೆಯನ್ನು ಮೂಡಾ ಮುಖಾಂತರ ನಿರ್ಮಾಣ ಮಾಡಿದ್ದಾರೆ ಎಂದರು.
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕನ್ಸಲ್ಟೆಂಟ್ ಇದ್ದರೂ, ಖಾಸಗಿ ಕನ್ಸಲ್ಟೆಂಟ್ ಮೂಲಕ 10 ಕೋಟಿ ರೂ. ಹಾಗೂ 4 ಕೋಟಿ ರೂ. ಬ್ಯಾಂಕ್ ಸಾಲದ ಮೂಲಕ ಮಾರುಕಟ್ಟೆ ನಿರ್ಮಾಣವಾಗಿದೆ. ಮಾರುಕಟ್ಟೆಯನ್ನು ಮಾಲ್ ರೀತಿಯಲ್ಲಿ ಕಟ್ಟಲಾಗಿದೆ. ಮಾರುಕಟ್ಟೆ ನಿರ್ಮಾಣವಾಗುವ ಸಂದರ್ಭದಲ್ಲಿ ಸಾಕಷ್ಟು ವಿರೋಧವೂ ವ್ಯಕ್ತವಾಗಿತ್ತು. ಆದರೆ ಈಗ ಮಂಗಳೂರು ಮನಪಾ ಮೇಲೆ 14 ಕೋಟಿ ರೂ. ಹೊರೆ ಬಿದ್ದಿದೆ ಎಂದು ಹೇಳಿದರು.
ಮಾರುಕಟ್ಟೆಯಲ್ಲಿ ನೀರು ವ್ಯವಸ್ಥೆ ಸರಿಯಾಗಿಲ್ಲ. ಮಳೆ ಸುರಿದರೆ ಬೇಸ್ಮೆಂಟ್ನಲ್ಲಿ ನೀರು ನಿಲ್ಲುತ್ತದೆ. ಸಂಪೂರ್ಣ ಕೆಲಸ ಇನ್ನೂ ಆಗಿಲ್ಲ. ಇಂದಿನ ಶಾಸಕ ವೇದವ್ಯಾಸ ಕಾಮತ್ ಹಾಗೂ ಮೂಡದ ಇಂದಿನ ಅಧ್ಯಕ್ಷ ರವಿಶಂಕರ್ ಮಿಜಾರು ಅವರು ಯಾವುದೆಲ್ಲ ಕಾಮಗಾರಿ ಬಾಕಿ ಇದೆ ಅದನ್ನು ತ್ವರಿತಗತಿಯಲ್ಲಿ ಸಂಪೂರ್ಣ ಮಾಡುತ್ತಿದ್ದಾರೆ. ಮಾರುಕಟ್ಟೆಯ ವ್ಯಾಪಾರಿಗಳಿಗೂ ವ್ಯವಸ್ಥೆ ಮಾಡುವಂತಹ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಸುಧೀರ್ ಕುಮಾರ್ ಶೆಟ್ಟಿ ಹೇಳಿದರು.
14 ಕೋಟಿಯಲ್ಲಿ 4 ಕೋಟಿ ರೂ.ಗಳನ್ನು ಮಂಗಳೂರು ಮನಪಾ ವಹಿಸಿಕೊಳ್ಳತ್ತದೆ. ಮಾರುಕಟ್ಟೆ ಸ್ಟಾಲ್ಗಳನ್ನು ಟೆಂಡರ್ ಮುಖಾಂತರ ಕೊಡುವ ಸಂದರ್ಭ ಲಭ್ಯವಾಗುವ ಡೆಪಾಸಿಟ್ ಹಣದ ಮೂಲಕ ಬ್ಯಾಂಕ್ ಸಾಲ ತೀರಿಸಲಾಗುತ್ತದೆ. ಜೊತೆಗೆ ಹೆಚ್ಚುವರಿಯಾಗಿ ಹಣ ಸಂಗ್ರಹವಾದಲ್ಲಿ ಅದರ ಮೂಲಕ ಮೂಡದಾ ಸಾಲವನ್ನು ಪಾವತಿಸಲಾಗುತ್ತದೆ. ಅದೇ ರೀತಿ ಮೂಡಾಕ್ಕೆ ಕೊಡುವ ಹಣವನ್ನು ಹಂತಹಂತವಾಗಿ ಪಾವತಿ ಮಾಡಲಾಗುತ್ತದೆ ಎಂದು ತಿಳಿಸಿದರು.