ಮಂಗಳೂರು: ಡಿಹೆಚ್‌ಎಲ್ ಕಸ್ಟಮರ್ ಕೇರ್(DHL Customer Care)ನಿಂದ ಕಾಲ್ ಮಾಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ಸಾವಿರಾರು ರೂ. ಹಣ ವಂಚಿಸಿರುವ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೋಸ ಹೋಗಿರುವ ವ್ಯಕ್ತಿ ನ.13ರಂದು ಬೆಳಗ್ಗೆ 10:17ರ ಸುಮಾರಿಗೆ ಡಿಹೆಚ್‌ಎಲ್ ಕಸ್ಟಮರ್ ಕೇರ್‌ಗೆ(DHL Customer Care) ಕರೆ ಮಾಡಿದ್ದಾರೆ. ಆ ಬಳಿಕ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ಡಿಹೆಚ್‌ಎಲ್ ಕಸ್ಟಮರ್ ಕೇರ್‌ನಿಂದ ಕಾಲ್ ಮಾಡುತ್ತಿರುವುದಾಗಿ ತಿಳಿಸಿದ್ದಾನೆ. ಅಲ್ಲದೇ ಒಂದು ಆ್ಯಪ್ ಡೌನ್‌ಲೋಡ್ ಮಾಡುವಂತೆ ಹೇಳಿದ್ದಾನೆ. ಅದಕ್ಕಾಗಿ ಮೊಬೈಲ್‌ಗೆ ಒಂದು ಲಿಂಕ್ವೊಂದನ್ನು ಕಳುಹಿಸಿದ್ದಾನೆ ಎನ್ನಲಾಗಿದೆ.
ಆತ ಕಳುಹಿಸಿರುವ ಲಿಂಕ್ ಅನ್ನು ತೆರೆದು ತಮ್ಮ ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಒಟಿಪಿ(OTP)ಯನ್ನು ದೂರುದಾರರು ನಮೂದಿಸಿದ್ದು, ತಕ್ಷಣ ಅವರ ಬ್ಯಾಂಕ್ ಖಾತೆಯಿಂದ 24,999 ರೂ. ಕಡಿತಗೊಂಡಿದೆ. ಬಳಿಕ ಇನ್ನೊಂದು ಒಟಿಪಿಯನ್ನು ನಮೂದಿಸಿದ್ದು, ಈ ಸಂದರ್ಭ ಮತ್ತೆ 24,999ರೂ. ಬ್ಯಾಂಕ್ ಖಾತೆಯಿಂದ ಕಡಿತಗೊಂಡಿದೆ ಎಂದು ಮೋಸ ಹೋದ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.
ಬಳಿಕ ತಮ್ಮ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿದ್ದಾರೆ. ಅಪರಿಚಿತ ವ್ಯಕ್ತಿ ಹಂತ ಹಂತವಾಗಿ ಒಟ್ಟು ರೂ 49,998 ರೂ. ಹಣವನ್ನು ತಮ್ಮ ಖಾತೆಯಿಂದ ವರ್ಗಾಯಿಸಿ ಮೋಸ ಮಾಡಿರುವುದಾಗಿ ಸೆನ್ ಪೊಲೀಸ್ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಮನೆಯಲ್ಲೇ ನೇಣು ಬಿಗಿದುಕೊಂಡು ಮಾಜಿ ಕಾರ್ಪೊರೇಟರ್ ಆತ್ಮಹತ್ಯೆ