ದಕ್ಷಿಣ ಕನ್ನಡ : ಬೆಳ್ತಂಗಡಿಯಲ್ಲಿ ಒಂದು ವರ್ಷದ ಹಿಂದೆ ಪ್ರೀತಿಸಿದ ಯುವತಿ ಜೊತೆಗೆ ಮದುವೆಯಾಗಿದ್ದನ್ನು ವಿರೋಧಿಸಿದ ತಂದೆಯನ್ನೇ ಮಗ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಮಂಗಳೂರಿನ 4ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಆರೋಪಿ ವಿರುದ್ಧದ ಕೊಲೆ ಆರೋಪ ಸಾಬೀತಾಗಿದೆ.
ಏನಿದು ಪ್ರಕರಣ?: ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ನಡು ಮುಡ್ಯೊಟ್ಟು ನಿವಾಸಿ ಶ್ರೀಧರ (59) ಎಂಬುವವರ ಮಗ ಹರೀಶ್ ಪೂಜಾರಿ (28) ಬೇರೆ ಜಾತಿಯ ಯುವತಿಯನ್ನು ಪ್ರೀತಿಸಿದ್ದನು. ಈ ವಿಷಯ ಮನೆಯಲ್ಲಿ ಪ್ರಸ್ತಾಪಿಸಿದಾಗ ಮದುವೆಗೆ ಮನೆಯವರ ವಿರೋಧ ವ್ಯಕ್ತವಾಗಿದೆ. ನಿಮ್ಮ ಸಹೋದರಿ ಮದುವೆ ಮಾಡದೇ ನಿನ್ನ ಮದುವೆ ಮಾಡುವುದಿಲ್ಲ ಎಂದು ಹರೀಶ್ ಪೂಜಾರಿಗೆ ತಂದೆ ಶ್ರೀಧರ ಪೂಜಾರಿ ತಿಳಿಸಿದ್ದರು.
ಮನೆಯವರ ವಿರೋಧ ನಡುವೆಯೂ ಹರೀಶ್ ಪೂಜಾರಿ 2021 ಜನವರಿಯಲ್ಲಿ ತನ್ನ ಪ್ರಿಯತಮೆ ಜತೆಗೆ ಮನೆ ಬಿಟ್ಟು ಹೋಗಿ ಮದುವೆಯಾಗಿ ಮೂರು ವಾರಗಳ ಬಳಿಕ ವಾಪಸ್ ಬಂದಿದ್ದಾನೆ. ಮನೆಗೆ ಬಂದ ದಂಪತಿಯನ್ನು ಒಳಗೆ ಸೇರಿಸಲು ತಂದೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಗ್ರಾಹಕರಿಂದು ಸ್ವಲ್ಪ ನಿರಾಳ: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಾವುದೇ ಏರಿಕೆ ಇಲ್ಲ
ಜ. 18 ರಂದು ಮಧ್ಯಾಹ್ನ ಇದೇ ವಿಚಾರದಲ್ಲಿ ತಂದೆ ಮತ್ತು ಮಗನ ಮಧ್ಯೆ ಗಲಾಟೆ ನಡೆದಿದೆ. ಈ ಸಂದರ್ಭದಲ್ಲಿ ಹರೀಶ್ ತನ್ನ ತಂದೆ ಶ್ರೀಧರ ಪೂಜಾರಿಗೆ ಕೊಲೆ ಬೆದರಿಕೆ ಹಾಕಿದ್ದನು. ಅದೇ ದಿನ ಸಂಜೆ ತಂದೆ ಪೇಟೆಗೆ ಹೋಗಿ ಮನೆಗೆ ಬಂದಿದ್ದಾರೆ. ಮತ್ತೆ ಇಬ್ಬರ ಮಧ್ಯೆ ವಾಗ್ವಾದ ನಡೆದಿದ್ದು, ಕೋಪದಲ್ಲಿ ಹರೀಶ್ ಮರದ ಪಕ್ಕಾಸಿನಿಂದ ತನ್ನ ತಂದೆಯ ತಲೆ ಮತ್ತು ಮುಖಕ್ಕೆ ಹೊಡೆದಿದ್ದಾನೆ. ಪರಿಣಾಮ ಶ್ರೀಧರ ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಘಟನೆ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಬೆಳ್ತಂಗಡಿ ಇನ್ಸ್‌ಪೆಕ್ಟರ್ ಸಂದೇಶ್ ಈ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ ನಾಲ್ಕನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಆರ್. ಪಲ್ಲವಿ ಅವರು ಆರೋಪಿ ಹರೀಶ್ ಪೂಜಾರಿ ದೋಷಿ ಎಂಬುದಾಗಿ ಸಾಬೀತಾಗಿದೆ ಎಂದು ತೀರ್ಪು ನೀಡಿ ಪ್ರಕರಣವನ್ನು ಮುಂದೂಡಿದರು. ಮುಂದಿನ ದಿನದಲ್ಲಿ ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.