ಮಂಗಳೂರು: ಕೊರೊನಾ ಭೀತಿಯ ಹಿನ್ನೆಲೆ ದ.ಕ. ಜಿಲ್ಲೆಯು ಮಾರ್ಚ್ 31ರವರೆಗೆ ಲಾಕ್ ಡೌನ್ ಆಗಲಿದೆ. ರಾಜ್ಯ ಸರ್ಕಾರವು ಈಗಾಗಲೇ 9 ಜೆಲ್ಲೆಗಳನ್ನು ಲಾಕ್ ಡೌನ್ ಮಾಡಬೇಕೆಂದು ಘೋಷಿಸಿದೆ. ನಮ್ಮ ಜಿಲ್ಲೆಯು ಕಾಸರಗೋಡಿಗೆ ಹತ್ತಿರವಿರೋದರಿಂದ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಾದ ಹಿನ್ನೆಲೆಯಲ್ಲಿ ಲಾಕ್ಡೌನ್ ವ್ಯವಸ್ಥೆಯನ್ನು ಮುಂದುವರಿಸಲಾಗುತ್ತಿದೆ ಎಂದು ದ. ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಜೆ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊರೊನಾ ಸೋಂಕು ಶೀಘ್ರ ಹರಡುವ ಕಾಯಿಲೆಯಾದ್ದರಿಂದ ನಾವು ಲಾಕ್ ಡೌನ್ ಮಾಡಬೇಕಾಗಿದೆ. ನಾಗರಿಕರೆಲ್ಲರೂ ಇದಕ್ಕೆ ಸಹಕರಿಸಬೇಕು ಎಂದು ಹೇಳಿದರು. ಅಲ್ಲದೆ ಕಾಸರಗೋಡು ಗಡಿಭಾಗದಲ್ಲಿರುವ ತಲಪಾಡಿವರೆಗೆ ಯಾವುದೇ ತುರ್ತು ವ್ಯವಸ್ಥೆ ಕಾರ್ಯ ನಿರ್ವಹಿಸಲಿದೆ.
ಆದರೆ ಲಾಕ್ ಡೌನ್ ಇರುವವರೆಗೆ ಯಾರೂ ವಿನಾ ಕಾರಣ ಮಾರ್ಗದಲ್ಲಿ ತಿರುಗಾಡೋದು ಬೇಡ. ಮನೆಯಲ್ಲಿದ್ದು ಸಹಕರಿಸಿ. ನಮ್ಮ ದೇಶದಲ್ಲಿ ಅತೀ ಹೆಚ್ಚು ಜನಸಂಖ್ಯೆ ಇರೋದರಿಂದ ಬೇಗ ಈ ರೋಗ ಹರಡುತ್ತದೆ. ಆಮೇಲೆ ನಿಯಂತ್ರಣ ಮಾಡೋದು ಬಹಳ ಕಷ್ಟ. ಆದ್ದರಿಂದ ಆದೇಶ ತೆಗೆಯುವವರೆಗೆ ಸಹಕರಿಸಿ. ಅಗತ್ಯ ವಸ್ತುಗಳಿಗೆ ತೊಂದರೆಯಾಗದಂತೆ ನಾವು ನೋಡಿಕೊಳ್ಳುತ್ತೇವೆ. ಬ್ಯಾಂಕ್ ಮತ್ತಿತರರ ವ್ಯವಸ್ಥೆಯೂ ಇರಲಿದೆ. ಎಟಿಎಂ ಸೇವೆ ಕೂಡಾ ಎಂದಿನಂತೆ ಇರಲಿದೆ ಎಂದು ತಿಳಿಸಿದರು.