ಮಂಗಳೂರು: ಇಂಟರ್ನ್ಶಿಪ್ಗೆಂದು ಬಂದಿದ್ದ ಕಾನೂನು ವಿದ್ಯಾರ್ಥಿನಿಗೆ ಕಚೇರಿಯಲ್ಲಿ ಲೈಂಗಿಕ ಕಿರುಕುಳ ನೀಡಿರುವ ಆರೋಪಿ ಕೆ.ಎಸ್.ಎನ್.ರಾಜೇಶ್ ಭಟ್ ಪರ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯನ್ನು 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ ತಿರಸ್ಕಾರ ಮಾಡಿ ಆದೇಶಿಸಿದೆ.
ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ಧ್ರುವ ಹೆಗ್ಡೆ, ಮಹಾಲಕ್ಷ್ಮೀ ಹೆಗ್ಡೆ, ಶಿವಾನಂದ ಎಂಬವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಅದೇ ರೀತಿ ರಾಜೇಶ್ ಭಟ್‌ಗೆ ತಪ್ಪಿಸಿಕೊಳ್ಳಲು ಸಹಕಾರ ನೀಡಿದ್ದಕ್ಕಾಗಿ ಬೋಂದೆಲ್ ನಿವಾಸಿ ಅನಂತ ಭಟ್ ಗುರುವಾರವೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಕಾನೂನು ವಿದ್ಯಾರ್ಥಿನಿ ತನಗೆ ಕಚೇರಿಯಲ್ಲಿಯೇ ನ್ಯಾಯವಾದಿ ರಾಜೇಶ್ ಭಟ್ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಆರೋಪಿಸಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಅ.18ರಂದು ಮಹಿಳಾ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿತ್ತು. ಆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ, ತೆರೆಮರೆಯಲ್ಲಿಯೇ ಇದ್ದುಕೊಂಡು ನಿರೀಕ್ಷಣಾ ಜಾಮೀನಿಗೆ ಪ್ರಯತ್ನಿಸಿದ್ದಾನೆ. ಆದರೆ ನ್ಯಾಯಾಲಯ ಅರ್ಜಿಯ ವಿಚಾರಣೆಯನ್ನು ಎರಡು ಬಾರಿ ಮುಂದೂಡಿದ್ದು, ಮೂರನೇ ಬಾರಿ ಜಾಮೀನು ಅರ್ಜಿಯನ್ನು ತಿರಸ್ಕಾರ ಮಾಡಿ ಆದೇಶಿಸಿದೆ.
ಕಾನೂನು ಇಂಟರ್ನ್‌ಶಿಪ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿರುವ ವಕೀಲ ಕೆ ಎಸ್ ಎನ್ ರಾಜೇಶ್ ಭಟ್ ಅವರನ್ನು ಕರ್ನಾಟಕ ಸ್ಟೇಟ್ ಬಾರ್ ಕೌನ್ಸಿಲ್ ಸದಸ್ಯತ್ವದಿಂದ ಈಗಾಗಲೇ ಅಮಾನತುಗೊಳಿಸಿ ಆದೇಶಿಸಲಾಗಿದೆ. ಈ ಹಿನ್ನೆಲೆ ಅವರು ಮುಂದಿನ ಆದೇಶದವರೆಗೂ ಪ್ರಾಕ್ಟೀಸ್ ಮಾಡದಂತೆ ಸೂಚಿಸಲಾಗಿದೆ.