ಸುಬ್ರಹ್ಮಣ್ಯ: ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ ತಾಲೂಕಿನಾದ್ಯಂತ ನಿರಂತರವಾಗಿ ಭಾರಿ ಮಳೆ ಸುರಿಯುತ್ತಿದ್ದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕುಮಾರಧಾರಾ ಸ್ನಾನ ಘಟ್ಟವು ಸಂಪೂರ್ಣ ಮುಳುಗಡೆಯಾಗಿದೆ.
ಶಿರಾಡಿ ಘಾಟಿ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ಕಳೆದ 4 ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕುಮಾರಧಾರಾ, ನೇತ್ರಾವತಿ, ಪಯಸ್ವಿನಿ, ಗುಂಡ್ಯ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.
ಇನ್ನು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿದ ಭಕ್ತಾದಿಗಳು ಕುಮಾರಧಾರಾ ನದಿಯ ದಡದಲ್ಲಿ ತೀರ್ಥಸ್ನಾನ ನೆರವೇರಿಸುತ್ತಿರುವ ದೃಶ್ಯಗಳು ಕಂಡು ಬಂದಿದೆ. ನದಿಯ ದಡದಲ್ಲಿ ತೀರ್ಥಸ್ನಾನ ಮಾಡಲು ಭಕ್ತರಿಗೆ ಅವಕಾಶ ನೀಡಲಾಗಿದ್ದು, ನದಿಗೆ ಇಳಿಯದಂತೆ ಎಚ್ಚರಿಕೆ ಸಂದೇಶ ನೀಡಲಾಗಿದೆ.