ಮಂಗಳೂರು: ಕೇಂದ್ರ ಸರ್ಕಾರದ ಹಸ್ತಕ್ಷೇಪದಿಂದ ಅಧಿಕಾರಿಗಳ ರಾಜೀನಾಮೆ ಹೆಚ್ಚುತ್ತಿದೆ ಎಂದು ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ ಆರೋಪಿಸಿದ್ದಾರೆ.
ನಗರದ ಸಂತ ಅಲೋಶಿಯಸ್ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಆಶ್ರಯದಲ್ಲಿ ಮಾರ್ಗರೇಟ್ ಆಳ್ವ ಅವರು ತಮ್ಮ 'ರಾಜಕೀಯ ನೆನಪುಗಳ' ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕೇಂದ್ರ ಸರ್ಕಾರವು ಎಲ್ಲಾ ಕಡೆಗಳಲ್ಲಿಯೂ ಅನಗತ್ಯ ಹಸ್ತಕ್ಷೇಪ ಮಾಡುತ್ತಿರುವುದರಿಂದ ಐಎಎಸ್ ಅಧಿಕಾರಿಗಳು, ನ್ಯಾಯಾಧೀಶರು ರಾಜೀನಾಮೆ ನೀಡುತ್ತಿದ್ದಾರೆ. ದೇಶದ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಸಿಬಿಐ, ಕೇಂದ್ರ ಸರ್ಕಾರದ ಅಧೀನದಲ್ಲಿವೆ. ಇದು ದೇಶದ ಸೋಲು ಎಂದು ಕಿಡಿಕಾರಿದರು.
ಇಂತಹ ಗಂಭೀರ ಪ್ರಕರಣಗಳು ದೇಶದಲ್ಲಿ ನಡೆಯುತ್ತಿದ್ದರೂ, ಯುವ ಜನಾಂಗ ಬಾಯಿ ಬಿಡುತ್ತಿಲ್ಲ. ಅಲ್ಲದೆ ಈ ಸಮಾಜದಲ್ಲಿ ನಾಯಕರು, ಮುಖಂಡರು ಎನಿಸಿಕೊಂಡವರು ಮೌನ ವಹಿಸಿರುವುದು ಅಪಾಯದ ಮುನ್ಸೂಚನೆ. ದೇಶದಲ್ಲಿ ಈಗ ಪ್ರಶ್ನಿಸುವ ಮನೋಭಾವವೇ ಎಲ್ಲರಲ್ಲಿ ಸತ್ತಿದೆಯೋ ಅಥವಾ ಹತ್ತಿಕ್ಕಲಾಗುತ್ತಿದೆಯೋ ತಿಳಿಯುತ್ತಿಲ್ಲ ಎಂದು ಆಳ್ವ ಆತಂಕ ವ್ಯಕ್ತಪಡಿಸಿದ್ರು.
ಮಹಿಳೆಯರಿಗೆ ಇಂದು ದೇಶದಲ್ಲಿ 33% ಮೀಸಲಾತಿ ಇದೆ. ಆದರೆ ಅದು ಮಹಿಳೆಯರ ಏಳಿಗೆಗೆ ಈ ಮೀಸಲಾತಿ ಸಾಕಾಗುವುದಿಲ್ಲ. ಸರ್ಕಾರ ಈ ಮೀಸಲಾತಿಯನ್ನು ಪರಿಷ್ಕರಿಸಿ ಮಹಿಳೆಯರಿಗೆ ಎಲ್ಲಾ ವಿಭಾಗಗಳಲ್ಲಿಯೂ 52% ಮೀಸಲಾತಿ ನೀಡಲಿ ಎಂದು ಮಾರ್ಗರೇಟ್ ಆಳ್ವ ಒತ್ತಾಯಿಸಿದ್ರು.