ಮಂಗಳೂರು: ಇತ್ತೀಚೆಗೆ ಶ್ರೀಲಂಕಾದ ಬಾಂಬ್ ದಾಳಿಗೆ ಬಲಿಯಾದವರ ಆತ್ಮಕ್ಕೆ ಚಿರಶಾಂತಿ ಕೋರಲು ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ರೆ.ಫಾ.ಪೀಟರ್ ಪೌಲ್ ಸಲ್ಡಾನ್ ಅವರ ಮಾರ್ಗದರ್ಶನದಲ್ಲಿ ನಗರದ ಮಿಲಾಗ್ರಿಸ್ ಚರ್ಚ್ ಗ್ರೌಂಡ್ನಲ್ಲಿ ನೂರಾರು ಮಂದಿ ಮೇಣದಬತ್ತಿ ಬೆಳಗಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕ್ರೈಸ್ತ ಸಮುದಾಯದ ಧಾರ್ಮಿಕ ಪದ್ಧತಿಯಂತೆ ಪ್ರಾರ್ಥನೆ ಸಲ್ಲಿಸಲಾಯಿತು. ಜೊತೆಗೆ ಮೃತರ ಆತ್ಮಕ್ಕೆ ಶಾಂತಿಯನ್ನು ಕೋರಿ ಒಂದು ನಿಮಿಷದ ಮೌನ ಪ್ರಾರ್ಥನೆ ಮಾಡಲಾಯಿತು. ಈ ಸಂದರ್ಭ ರೊಸಾರಿಯೋ ಕೆಥೆಡ್ರೆಲ್ನ ಧರ್ಮಗುರು ಜೆ.ಬಿ.ಕ್ರಾಸ್ತಾ ಮಾತನಾಡಿ, ಕಳೆದ ಭಾನುವಾರ ನಮ್ಮ ನೆರೆಯ ರಾಷ್ಟ್ರ ಶ್ರೀಲಂಕಾದಲ್ಲಿ ಸುಮಾರು 300 ಜನರು ಬಾಂಬ್ ಸ್ಪೋಟದಿಂದ ಮರಣ ಹೊಂದಿದರು. ಈ ಬಾಂಬ್ ದಾಳಿಯಲ್ಲಿ ಮೂರು ಚರ್ಚ್ಗಳು ಮತ್ತು ಎರಡು ಹೋಟೆಲ್ಗಳಲ್ಲಿ ನಿರಪರಾಧಿಗಳಾದ ನಾಗರಿಕರು ಮರಣ ಹೊಂದಿದರು. ಈ ಹಿನ್ನೆಲೆಯಲ್ಲಿ ಮಡಿದ ಅಮಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸಲು ಮಂಗಳೂರು ಧರ್ಮಪ್ರಾಂತ್ಯ ಈ ಪ್ರಾರ್ಥನೆಯನ್ನು ಆಯೋಜಿಸಿದೆ ಎಂದರು.
ಈ ಬಾಂಬ್ ದಾಳಿಯಿಂದ ಜಗತ್ತಿಗೆ ದೊಡ್ಡ ಆಘಾತವಾಗಿದೆ. ಈ ಕಾರಣಕ್ಕಾಗಿ ದೇವರಲ್ಲಿ ಪ್ರಾರ್ಥಿಸಿ ಶಾಂತಿ ನೆಲೆಸಲಿ ಹಾಗೂ ನಾವೆಲ್ಲರೂ ಅನ್ಯೋನ್ಯತೆಯಿಂದ ಬಾಳಲು ಪ್ರೇರಣೆ ದೊರೆಯಲಿ ಎಂದು ಆಶಿಸುತ್ತೇವೆ. ಭಗವಂತ ಏಸು ಹೇಳಿದಂತೆ ಬೇರೆಯವರನ್ನು ನಾವು ಕ್ಷಮಿಸಬೇಕು. ಆದ್ದರಿಂದ ಆದದ್ದನ್ನು ಮರೆತು, ಎಲ್ಲರೂ ಒಟ್ಟಾಗಿ, ಸೌಹಾರ್ದತೆಯಿಂದ ಬಾಳೋಣ. ನಮ್ಮಲ್ಲಿ ಭೇದ ಭಾವ ಮರೆತು ನಾವೆಲ್ಲಾ ಒಂದೇ ತಾಯಿ ಮಕ್ಕಳೆಂಬ ಭಾವನೆಯಲ್ಲಿ ಬಾಳೋಣ ಎಂದು ಹೇಳಿದರು.