ಮಂಗಳೂರು: ನಗರದ ಬೆಂದೂರ್ನ ಸೆಬಾಸ್ಟಿಯನ್ ಸಭಾಂಗಣದಲ್ಲಿನ ದಿ.ಮಹಮ್ಮದ್ ಬದ್ರುದ್ದೀನ್ ವೇದಿಕೆಯಲ್ಲಿ ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಗೌರವ ವಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾಂಗ್ರೆಸ್ನ ನಿಷ್ಠಾವಂತ ಕಾರ್ಯಕರ್ತ ದಿ.ಮಹಮ್ಮದ್ ಬದ್ರುದ್ದೀನ್ ಅವರ ಸ್ಮರಣಾರ್ಥ ಹಾಗೂ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ ಹಿರಿಯ ತಲೆಮಾರಿನ ನಿಷ್ಠಾವಂತ ಕಾರ್ಯಕರ್ತರ ನೆನಪಿಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಿರಿಯ ಕಾಂಗ್ರೆಸಿಗರಾದ ಕೃಷ್ಣಪ್ಪ ಮೆಂಡನ್, ಯಾದವ ಸಾಲ್ಯಾನ್ ಹಾಗೂ ಆಸ್ಟಿನ್ ಮೊಂತೆರೊ ಅವರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು. ಜೊತೆಗೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪುರಸ್ಕಾರ ಸಲ್ಲಿಸಲಾಯಿತು.
ಬಳಿಕ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ದಿ.ಮಹಮ್ಮದ್ ಬದ್ರುದ್ದೀನ್ ಹಾಗೂ ನಮ್ಮ ಸ್ನೇಹ 30 ವರ್ಷಗಳ ಸುದೀರ್ಘ ಕಾಲದ್ದಾಗಿತ್ತು. ಅವರೊಬ್ಬ ಅಪರೂಪದ ನಾಯಕರಾಗಿದ್ದರು. ಇಂದು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಬೆಳೆಯಬೇಕಾದಲ್ಲಿ ಬದ್ರುದ್ದೀನ್ ಅವರ ಪಾತ್ರ ಬಹಳಷ್ಟಿದೆ. ಅವರು ಎಂದೂ ರಾಜನಾಗಿರಲಿಲ್ಲ. ಆದರೆ ಸಾಕಷ್ಟು ರಾಜರುಗಳನ್ನು ಸೃಷ್ಟಿಸಿದ್ದರು. ಯಾವ ಸಂದರ್ಭದಲ್ಲಿಯೂ, ಎಂಥ ಸಂಕಷ್ಟ ಬಂದರೂ ಬದ್ರುದ್ದೀನ್ ಅದಕ್ಕೆ ಪರಿಹಾರ ಹುಡುಕುತ್ತಿದ್ದರು. ಬದ್ರುದ್ದೀನ್ ಅವರ ಹೋರಾಟದ ಮನೋಭಾವ, ಪಕ್ಷ ನಿಷ್ಠೆಗೆ ಯಾರಾದರೂ ಮೆಚ್ಚುಗೆ ವ್ಯಕ್ತಪಡಿಸಲೇಬೇಕು. ಇಂದಿಗೂ ಮಹಮ್ಮದ್ ಬದ್ರುದ್ದೀನ್ ಅವರು ನಮ್ಮೊಂದಿಗೆ ಇಲ್ಲ ಎಂಬುವುದನ್ನು ನಂಬಲಸಾಧ್ಯ ಎಂದರು.
ವೇದಿಕೆಯಲ್ಲಿ ಮಾಜಿ ಸಚಿವರಾದ ಯು.ಟಿ.ಖಾದರ್, ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕರಾದ ಮೊಯ್ದೀನ್ ಬಾವಾ, ಶಕುಂತಲಾ ಶೆಟ್ಟಿ, ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮಾಜಿ ಮೇಯರ್ ಗಳಾದ ಭಾಸ್ಕರ ಮೊಯ್ಲಿ, ಕವಿತಾ ಸನಿಲ್ ಮತ್ತಿತರರು ಉಪಸ್ಥಿತರಿದ್ದರು.