ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ಬಳಿಯಲ್ಲಿರುವ, ವಿಮಾನ ನಿಲ್ದಾಣದ ಹೊರಭಾಗದಲ್ಲಿರುವ ಅದ್ಯಪಾಡಿಯಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ವಿಮಾನ ನಿಲ್ದಾಣದ ಹೊರಭಾಗದ ರಸ್ತೆ ಬದಿಯಲ್ಲಿ ಗುಡ್ಡ ಕುಸಿತವಾಗಿದೆ. ಅದ್ಯಪಾಡಿಯು ವಿಮಾನ ನಿಲ್ದಾಣದ ರನ್ ವೇ ಬಳಿ ಇರುವ ಪ್ರದೇಶವಾಗಿದೆ.
ಟೇಬಲ್ ಟಾಪ್ ಮಾದರಿಯಲ್ಲಿರುವ ಮಂಗಳೂರು ವಿಮಾನ ನಿಲ್ದಾಣದ ಕೆಳ ಭಾಗದಲ್ಲಿ ಅದ್ಯಪಾಡಿ ಗ್ರಾಮ ಇದೆ. ಅದ್ಯಪಾಡಿ - ಕೈಕಂಬ ಸಂಪರ್ಕಿಸುವ ರಸ್ತೆಯಲ್ಲಿ ಕೆಲ ದಿನಗಳ ಹಿಂದೆಯೇ ಮೋರಿ ಕುಸಿದಿದ್ದು, ಆ ಬಳಿಕ ರಸ್ತೆಯ ಎರಡೂ ಬದಿಗಳಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಿ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
ಇದೀಗ ಒಂದೆಡೆ ಗುಡ್ಡ ಕುಸಿತವಾಗಿದ್ದು, ಮತ್ತೊಂದೆಡೆ ಈ ರಸ್ತೆ ಭಾರಿ ಮಳೆಗೆ ಕೊಚ್ಚಿ ಹೋಗಿದೆ. ವಿಮಾನ ನಿಲ್ದಾಣದ ರನ್ ವೇ ಯಿಂದ ನೀರು ಭಾರಿ ಪ್ರಮಾಣದಲ್ಲಿ ಹೊರಬರುತ್ತಿರುವುದರಿಂದ ಈ ಸಮಸ್ಯೆ ಉದ್ಭವಿಸಿದೆ ಎಂದು ಹೇಳಲಾಗಿದೆ.
ರನ್ ವೇ ಗೆ ಅಪಾಯವಾಗಿಲ್ಲವೆಂದು ವಿಮಾನ ನಿಲ್ದಾಣ ಸ್ಪಷ್ಟನೆ: ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ, ವಿಮಾನ ನಿಲ್ದಾಣದ ಹೊರಭಾಗದ ಸುತ್ತುವರಿದ ರಸ್ತೆಯಲ್ಲಿ ಭೂ ಕುಸಿತವಾಗಿದ್ದು ವಿಮಾನದ ರನ್ ವೇಗೆ ಯಾವುದೇ ಅಪಾಯವಾಗಿಲ್ಲ. ವಿಮಾನ ನಿಲ್ದಾಣದಲ್ಲಿ ಎಂದಿನಂತೆ ಚಟುವಟಿಕೆಗಳು ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : ಭಾರಿ ಮಳೆ.. ಮಡಿಕೇರಿ - ಮಂಗಳೂರು ಹೆದ್ದಾರಿ ಮೇಲೆ ಗುಡ್ಡ ಕುಸಿತ, ಆತಂಕದಲ್ಲಿ ಜನ