ಮಂಗಳೂರು(ದಕ್ಷಿಣ ಕನ್ನಡ) : ದಕ್ಷಿಣ ಕನ್ನಡ ಜಿಲ್ಲೆಯ ಮೂರು ಹತ್ಯೆಗಳ ನೈಜ ಆರೋಪಿಗಳನ್ನು ಆಗಸ್ಟ್ 5ರೊಳಗೆ ಬಂಧಿಸದಿದ್ದರೆ ಮಂಗಳೂರಿಗೆ ಬಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸತ್ಯಾಗ್ರಹ ನಡೆಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಸರ್ಕಾರಕ್ಕೆ ಡೆಡ್ಲೈನ್ ಕೊಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದುಷ್ಕರ್ಮಿಗಳಿಂದ ಸಾವಿಗೀಡಾದ ಮಸೂದ್, ಪ್ರವೀಣ್ ನೆಟ್ಟಾರು, ಫಾಝಿಲ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಬಳಿಕ ಮಂಗಳೂರಿನಲ್ಲಿ ಮಾತನಾಡಿದ ಅವರು, ಈ ಮೂವರು ಯುವಕರ ಮನೆಗೆ ಭೇಟಿ ನೀಡಿದ ಬಳಿಕ ಮನಸ್ಸು ನೊಂದಿದೆ. ಈ ಮೂರು ಪ್ರಕರಣಗಳ ಆರೋಪಿಗಳ ಬಂಧನವಾಗಬೇಕು. ಆ. 5 ರೊಳಗೆ ನೈಜ ಆರೋಪಿಗಳನ್ನು ಬಂಧಿಸುವಂತೆ ಗಡುವು ನೀಡುತ್ತಿದ್ದೇನೆ. ಒಂದು ವೇಳೆ ಅಷ್ಟರೊಳಗೆ ಬಂಧಿಸದಿದ್ದರೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸತ್ಯಾಗ್ರಹ ನಡಸುತ್ತೇನೆ ಎಂದರು.
ನಾನು ಮಾಡುವ ಸತ್ಯಾಗ್ರಹ ಜನರ ಬದುಕಿಗಾಗಿ. ಈ ಸತ್ಯಾಗ್ರಹದಲ್ಲಿ ಬಜರಂಗದಳದವರು ಸೇರಿದಂತೆ ಎಲ್ಲರೂ ಕೈಜೋಡಿಸಲಿ ಎಂದು ವಿನಂತಿಸುತ್ತಿದ್ದೇನೆ. ನಾನು ಇದನ್ನು ರಾಜಕೀಯ ಲಾಭಕ್ಕಾಗಿ ಮಾಡುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮ್ಮ ಪಕ್ಷದಿಂದ ಚುನಾವಣೆಗೆ ನಿಲ್ಲಲು ಅಭ್ಯರ್ಥಿಗಳಿಲ್ಲ. ಚುನಾವಣಾ ದೃಷ್ಟಿಯಿಂದ ಮಾಡದೆ ಜನರ ನೆಮ್ಮದಿಗಾಗಿ ಇದನ್ನು ಮಾಡುತ್ತಿದ್ದೇನೆ. ಆಗಸ್ಟ್ 6ಕ್ಕೆ ಸತ್ಯಾಗ್ರಹ ನಡೆಸಲು ನಾನು ಸಿದ್ಧನಿದ್ದೇನೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಡಿಜಿಪಿ ಪ್ರವೀಣ್ ಸೂದ್ ಗೆ ತರಾಟೆ: ರಾಜ್ಯದ ಡಿಜಿಪಿ ಅವರು ದಕ್ಷಿಣ ಕನ್ನಡ ಜಿಲ್ಲೆಗೆ ಬಂದದ್ದು ನೋಡಿ ದೊಡ್ಡ ಮಟ್ಟದ ಸಂದೇಶ ಕೊಡಲು ಬಂದಿದ್ದರು ಎಂದು ತಿಳಿದುಕೊಂಡಿದ್ದೆ. ಅವರು ಕೇವಲ ಐದು ಗಂಟೆ ಇದ್ದು ಹೋಗಿದ್ದಾರೆ. ಅವರಿಗೆ ಜವಾಬ್ದಾರಿ ಇದ್ದರೆ ಘಟನೆ ನಡೆದ ಮಾರನೆ ದಿನವೇ ಮಂಗಳೂರಿಗೆ ಬರಬೇಕಿತ್ತು. ಅವರಿಗೆ ಬೆಂಗಳೂರಿನಲ್ಲಿ ಏನು ಕೆಲಸ. ಮುಖ್ಯಮಂತ್ರಿ ಬಂದು ಹೋಗಿದ್ದಾರೆ. ಅದಕ್ಕಿಂತ ದೊಡ್ಡ ಕೆಲಸ ಇತ್ತಾ? ಎಂದು ಹೆಚ್ಡಿಕೆ ಪ್ರಶ್ನಿಸಿದರು.
ವರ್ಗಾವಣೆಯ ಹಣದ ವ್ಯವಹಾರ ಮಾಡಲಿಕ್ಕಿತ್ತಾ? ಆರ್ಎಸ್ಎಸ್ ಸಂಘಸಂಸ್ಥೆಗಳು ಏನು ಹೇಳಿವೆ ಎಂದು ಹೇಳಲು ಇಲ್ಲಿಗೆ ಬಂದು ಹೋದದ್ದ. ಅವರು ಪೊಲೀಸ್ ಅಧಿಕಾರಿಯಾಗಿ ಹತ್ಯೆಯಾದವರ ಕುಟುಂಬಗಳನ್ನು ಭೇಟಿ ಮಾಡಬೇಕಿತ್ತು ಎಂದರು.
ಇದನ್ನೂ ಓದಿ : Praveen Murder case: ಎನ್ಐಎ ಕಾಟಾಚಾರಕ್ಕೆ ತನಿಖೆ ಮಾಡಬಾರದು.. ಹೆಚ್ಡಿಕೆ