ಮಂಗಳೂರು: ಸಾವಿರಾರು ವರ್ಷಗಳ ಐತಿಹಾಸಿಕ, ಧಾರ್ಮಿಕ ಹಿನ್ನೆಲೆಯಿರುವ ನಗರದ ಗುಜ್ಜರಕೆರೆಗೆ ಚರಂಡಿ ನೀರು ಹರಿದು ಹಾಳು ಕೊಂಪೆಯಾಗಿತ್ತು. ಜನರ ಒತ್ತಾಸೆ ಮೇರೆಗೆ ಕೆರೆಗೆ ಜಿಲ್ಲಾಡಳಿತ ಕಾಯಕಲ್ಪ ನೀಡಿದೆ. ಇದರಿಂದ ಸುಂದರವಾದ ವಾತಾವರಣ ನಿರ್ಮಾಣವಾಗಿದೆ. ವಿಹಾರಿಗಳು ಈಗ ಕೆರೆಗೆ ಎಡತಾಕುತ್ತಿದ್ದಾರೆ. ಅಲ್ಲದೇ, ಅಬಾಲವೃದ್ಧರಾದಿಯಾಗಿ ಎಲ್ಲರೂ ಇಲ್ಲಿಗೆ ಬರುತ್ತಿರುವುದರಿಂದ ಪಿಕ್ನಿಕ್ ಸ್ಪಾಟ್ ಆಗಿ ಮಾರ್ಪಟ್ಟಿದೆ.
ಈ ಕೆರೆಗೆ 1,800 ವರ್ಷಗಳ ಇತಿಹಾಸವಿದೆ. ಇದು ಉತ್ತರದಿಂದ ಆಗಮಿಸಿದ ನಾಥ ಪಂಥಿಯರಾದ ಮತ್ಸ್ಯೇಂದ್ರನಾಥರ ಸ್ನಾನಕ್ಕಾಗಿ ಅವರ ಶಿಷ್ಯ ಗೋರಕ್ಷನಾಥ ನಿರ್ಮಿಸಿದ ಕೆರೆ ಎಂಬ ಪ್ರತೀತಿ ಇದೆ. ಗುರು ಜನರ ಕೆರೆಯಾಗಿದ್ದ ಇದು ಈಗ ಜನರ ಬಾಯಲ್ಲಿ ಗುಜ್ಜರಕೆರೆಯಾಗಿದೆ.
![Gujjarakere](https://etvbharatimages.akamaized.net/etvbharat/prod-images/13573105_laje.jpg)
ಕುಡಿಯುವ ನೀರಿನ ಮೂಲವಾಗಿತ್ತು:
ಗುಜ್ಜರಕೆರೆಯಲ್ಲಿ ಈ ಹಿಂದೆ ಸಮೀಪದ ದೇವಾಲಯಗಳಿಗೆ ನೀರು ಹೊತ್ತೊಯ್ದು ಅಭಿಷೇಕ ಮಾಡುತ್ತಿದ್ದರು. ಅಲ್ಲದೇ, ಸುತ್ತಮುತ್ತಲಿನ ಮನೆಗಳಿಗೆ ಕುಡಿಯುವ ನೀರಿನ ಮೂಲವಾಗಿತ್ತು. ಕಾಲಕ್ರಮೇಣ ಈ ಕೆರೆಯ ಸುತ್ತಲೂ ಮನೆಗಳು, ವಸತಿ ಸಂಕೀರ್ಣಗಳು ತಲೆಯೆತ್ತಿ ಚರಂಡಿ ನೀರು ಕೆರೆಯೊಡಲು ಸೇರಿದ್ದರಿಂದ ಗುಜ್ಜರಕೆರೆಯು ಸಂಪೂರ್ಣ ಮಲಿನಗೊಂಡಿತ್ತು.
ಜೊಂಡು ಹುಲ್ಲು ಬೆಳೆದು, ಸೊಳ್ಳೆಗಳ ತಾಣವಾಗಿ ಮಾರ್ಪಟ್ಟಿತ್ತು. ಕೆರೆಯ ಸಂರಕ್ಷಣೆಗಾಗಿ ಸ್ಥಳೀಯರಾದ ನೇಮು ಕೊಟ್ಟಾರಿ ಸೇರಿದಂತೆ ಇತರರು ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆ ಆರಂಭಿಸಿ ಕೆರೆಯನ್ನು ಅಭಿವೃದ್ಧಿ ಪಡಿಸಲು ಪಣತೊಟ್ಟರು.
![Gujjarakere](https://etvbharatimages.akamaized.net/etvbharat/prod-images/13573105_lake.jpg)
ಅಭಿವೃದ್ಧಿಗಾಗಿ 4 ಕೋಟಿ ರೂಪಾಯಿ ಮಂಜೂರು: ಮಾಜಿ ಶಾಸಕರಾದ ಯೋಗೀಶ್ ಭಟ್, ಜೆ.ಆರ್. ಲೋಬೊ ಹಾಗೂ ಮಾಜಿ ಮೇಯರ್ ಹರಿನಾಥ್ರ ಕಾಲದಲ್ಲಿ ಕೆರೆ ಒಂದಷ್ಟು ಅಭಿವೃದ್ಧಿ ಕಂಡಿತು. ಇದೀಗ ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಮೇಯರ್ ಪ್ರೇಮಾನಂದ ಶೆಟ್ಟಿಯವರ ಮುತುವರ್ಜಿಯಿಂದ ಸ್ಮಾರ್ಟ್ ಸಿಟಿ ಯೋಜನೆಯಡಿ 4 ಕೋಟಿ ರೂ. ಅನುದಾನ ಮಂಜೂರು ಮಾಡಿ 3.43 ಎಕರೆ ವಿಸ್ತೀರ್ಣದ ಗುಜ್ಜರಕೆರೆಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗಿದೆ.
ಕೆರೆಯ ಸುತ್ತಲೂ ಸಿಂಥೆಟಿಕ್ ಟ್ರ್ಯಾಕ್, ವಿಹಾರಿಗಳಿಗೆ ಕುಳಿತುಕೊಳ್ಳಲು ಆಸನ, ಓಪನ್ ಜಿಮ್, ಮಕ್ಕಳಿಗೆ ಆಟವಾಡಲು ಸೌಕರ್ಯಗಳನ್ನು ಮಾಡಲಾಗಿದೆ. ಕೆರೆಯ ಸುತ್ತಲೂ ಹಸಿರು ವಾತಾವರಣ, ಕೆರೆಯಲ್ಲಿ ಬೃಹತ್ ಗಾತ್ರದ ಸಾಕಷ್ಟು ಮೀನುಗಳು, ಬಾತುಕೋಳಿಗಳು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿವೆ.
ಎಚ್ಚರಿಕೆ ಬೇಕಿದೆ: ಜನರು ಕೆರೆಗೆ ಇಳಿಯುವುದರಿಂದ ನೀರು ಮತ್ತೆ ಕಲುಷಿತಗೊಂಡು, ಜಲಚರಗಳ ಜೀವ ಹಾನಿಯೂ ಆಗಬಹುದು. ಆದ್ದರಿಂದ ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ಗುಜ್ಜರಕೆರೆಯ ಸಂರಕ್ಷಣೆಗಾಗಿ ಕೆರೆಯ ದ್ವಾರಗಳನ್ನು ಮುಚ್ಚುವ ವ್ಯವಸ್ಥೆ ಮಾಡಿ ಕೆರೆಗೆ ಯಾರೂ ಇಳಿಯದಂತೆ ಮಾಡಬೇಕು ಎಂಬುದು ಇಲ್ಲಿನ ಜನರ ಒತ್ತಾಯವಾಗಿದೆ.