ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ. ಗುದದ್ವಾರದಲ್ಲಿಟ್ಟುಕೊಂಡು ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಆರೋಪದ ಮೇಲೆ ಮೂವರನ್ನು ಬಂಧಿಸಿದ್ದಾರೆ.
ಮೂರು ಪ್ರಕರಣಗಳನ್ನು ಪತ್ತೆ ಹಚ್ಚಿರುವ ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು, ಒಟ್ಟು 49.40 ಲಕ್ಷ ಮೌಲ್ಯದ 1550 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಎಪ್ರಿಲ್ 16 ರಂದು ದುಬೈ ವಿಮಾನದಲ್ಲಿ ಬಂದ ಪ್ರಯಾಣಿಕ ಗುದದ್ವಾರದಲ್ಲಿ ಅಡಗಿಸಿಟ್ಟುಕೊಂಡಿದ್ದ 24 ಕ್ಯಾರೆಟ್ ಶುದ್ದ 392.260 ಗ್ರಾಂ ಚಿನ್ನದ ಪೇಸ್ಟ್ ಮತ್ತು ಬ್ಯಾಗ್ನಲ್ಲಿದ್ದ 52.350 ಗ್ರಾಂ ಚಿನ್ನ ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. ಈ ಚಿನ್ನದ ಮೌಲ್ಯ 14.09 ಲಕ್ಷ ಎಂದು ಅಂದಾಜಿಸಲಾಗಿದೆ.
ಎಪ್ರಿಲ್ 21 ರಂದು ದೋಹದಿಂದ ಬಂದ ಇಬ್ಬರು ಪ್ರಯಾಣಿಕರಿಂದ ಗುದದ್ವಾರದಲ್ಲಿ ಅಡಗಿಸಿಟ್ಟುಕೊಂಡಿದ್ದ 24/18 ಕ್ಯಾರೆಟ್ ಚಿನ್ನದ ಪೇಸ್ಟ್ ವಶಪಡಿಸಿಕೊಳ್ಳಲಾಗಿದೆ. ಓರ್ವ ಪ್ರಯಾಣಿಕನಿಂದ ರೂ 14.81 ಲಕ್ಷ ರೂ. ಮೌಲ್ಯದ 462.970 ಗ್ರಾಂ ಚಿನ್ನ ಮತ್ತೋರ್ವ ಪ್ರಯಾಣಿಕನಿಂದ 20.51 ಲಕ್ಷ ರೂ. ಮೌಲ್ಯದ 641 ಗ್ರಾಂ ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.