ಕುಕ್ಕೆ ಸುಬ್ರಹ್ಮಣ್ಯ: ಲಾಕ್ಡೌನ್ ಹಿನ್ನೆಲೆಯಲ್ಲಿ ಕಳೆದ ಏ. 21 ರಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರ ಆಗಮನವನ್ನು ನಿರ್ಬಂಧಿಸಲಾಗಿತ್ತು. ಆದರೆ ಇದೀಗ ಕೊರೊನಾ ಪ್ರಕರಣಗಳು ಕಡಿಮೆಯಾಗಿದ್ದು ಸರ್ಕಾರದ ಮಾರ್ಗಸೂಚಿ ಪ್ರಕಾರ ಸೋಮವಾರದಿಂದ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ.
ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇರಿದಂತೆ ಯಾವುದೇ ಸೇವೆಗಳು ಸರ್ಕಾರದ ಮುಂದಿನ ಆದೇಶದ ತನಕ ನಡೆಯುವುದಿಲ್ಲ. ಮಂಗಳಾರತಿ ಸೇವೆ ನೆರವೇರಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ತಿಳಿಸಿದ್ದಾರೆ.
ಭಕ್ತರು ಬೆಳಗ್ಗೆ 7 ರಿಂದ ಮಧ್ಯಾಹ್ನ 11.30 ರ ತನಕ, ಮಧ್ಯಾಹ್ನ 12.15 ರಿಂದ 1.30 ರ ತನಕ ಹಾಗೂ 2.30 ಯಿಂದ ಸಂಜೆ 6.30 ರ ತನಕ ದೇವರ ದರ್ಶನ ಪಡೆಯಬಹುದು. ಪ್ರತಿ 15 ನಿಮಿಷಕ್ಕೊಮ್ಮೆ ಮಂಗಳಾರತಿ ಮಾಡಲಾಗುತ್ತದೆ. ಆದರೆ ಮಂಗಳಾರತಿಗೆ ಯಾವುದೇ ಪ್ರಸಾದ ನೀಡಲಾಗುವುದಿಲ್ಲ. ದೇವಾಲಯದ ವಸತಿ ಗೃಹದಲ್ಲಿ ತಂಗಲು ಅವಕಾಶವಿಲ್ಲ. ಗಂಧ ಪ್ರಸಾದ, ತೀರ್ಥ ಪ್ರಸಾದ ನೀಡಲಾಗುವುದಿಲ್ಲ.
ಇನ್ನು ಭಕ್ತಾಧಿಗಳಿಗೆ ಭೋಜನ ಪ್ರಸಾದದ ವ್ಯವಸ್ಥೆ ಸಹ ಇರುವುದಿಲ್ಲ. ಪಂಚಕಜ್ಜಾಯ, ಲಡ್ಡುಪ್ರಸಾದ ವಿತರಣೆಯಾಗುವುದಿಲ್ಲ. ಪ್ರತಿಯೊಬ್ಬರನ್ನು ದೇವಾಲಯದ ಮುಂಭಾಗದಲ್ಲಿ ಕಡ್ಡಾಯವಾಗಿ ಥರ್ಮಾಮೀಟರ್‌ನಿಂದ ತಪಾಸಣೆ ಮಾಡಲಾಗುವುದು. ಜೊತೆಗೆ ಸ್ಯಾನಿಟೈಸರ್ ವ್ಯವಸ್ಥೆ ಸಹ ಮಾಡಲಾಗಿದೆ. ಜ್ವರ, ಕೆಮ್ಮು, ಶೀತವಿರುವ ಭಕ್ತರಿಗೆ ಪ್ರವೇಶಕ್ಕೆ ಅವಕಾಶವಿಲ್ಲ. ಖಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರ ಪಾಲನೆ ಮಾಡಬೇಕು ಎಂದು ಮೋಹನರಾಂ ಸುಳ್ಳಿ ತಿಳಿಸಿದ್ದಾರೆ.
ಇನ್ನು ರಾಜಗೋಪುರದ ಪ್ರಧಾನ ದ್ವಾರದ ಮೂಲಕ ಮಾತ್ರ ಭಕ್ತರಿಗೆ ಪ್ರವೇಶಾವಕಾಶ ನೀಡಲಾಗುತ್ತದೆ. ಉಳಿದ ದ್ವಾರಗಳಲ್ಲಿ ಭಕ್ತರಿಗೆ ಪ್ರವೇಶ ಇರುವುದಿಲ್ಲ. ಹೊರ ಬರಲು ಮತ್ತೊಂದು ದ್ವಾರವನ್ನು ಬಳಸಿಕೊಳ್ಳಲಾಗುವುದು. ಪ್ರಧಾನ ದ್ವಾರದ ಬಳಿಕ ಹೊರಾಂಗಣ ಮತ್ತು ಒಳಾಂಗಣಕ್ಕೆ ಪ್ರವೇಶಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಚೌಕಗಳನ್ನು ಬರೆಯಲಾಗಿದೆ. ಭಕ್ತರು ಈ ಚೌಕದ ಮೂಲಕ ಸರದಿ ಸಾಲಿನಲ್ಲಿ ನಿಲ್ಲಬೇಕು. ಆದಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಪ್ರವೇಶಿಸುವಾಗಲೂ ಇದೇ ಕ್ರಮವನ್ನು ಅನುಸರಿಸಲಾಗುತ್ತದೆ. ಭಕ್ತರು ಸಹಕರಿಸಬೇಕು ಎಂದು ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಹೇಳಿದ್ದಾರೆ.