ಮಂಗಳೂರು: ಶನಿವಾರ ರಾತ್ರಿ ಸುರಿದ ಭಾರಿ ಮಳೆಯ ಪರಿಣಾಮ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೇರೆಡೆಯಿಂದ ಬಂದಿದ್ದ ವಿಮಾನಗಳು ಲ್ಯಾಂಡ್ ಆಗಲು ತೊಂದರೆಯಾಗಿತ್ತು. ಹೀಗಾಗಿ ವಿಮಾನವನ್ನು ಬೇರೆ ಏರ್ಪೋರ್ಟ್ಗೆ ಕಳುಹಿಸಲಾಗಿದೆ.
ಮಂಗಳೂರು ಏರ್ಪೋರ್ಟ್ನಲ್ಲಿ ರನ್ ವೇ ಅಸ್ಪಷ್ಟವಾಗಿ ಕಂಡು ಬಂದ ಕಾರಣ ಚೆನ್ನೈ-ಮಂಗಳೂರು, ಹೈದರಾಬಾದ್-ಮಂಗಳೂರು ಹಾಗೂ ಮುಂಬೈ-ಮಂಗಳೂರು ವಿಮಾನಗಳು ಕೇರಳದ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿವೆ. ಕುವೈತ್ನಿಂದ ಬಂದಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ಸ್ವಲ್ಪ ಸಮಯ ಆಕಾಶದಲ್ಲಿಯೇ ಸುತ್ತಾಡಿ ಬಳಿಕ ಬೆಂಗಳೂರಿಗೆ ತೆರಳಿದೆ. ಮಂಗಳೂರಲ್ಲಿ ವಿಮಾನ ಲ್ಯಾಂಡಿಂಗ್ ಆಗದ ಕಾರಣ ಸುಮಾರು 500ಕ್ಕೂ ಅಧಿಕ ಪ್ರಯಾಣಿಕರಿಗೆ ತೊಂದರೆ ಎದುರಾಯಿತು.
ಧರ್ಮಸ್ಥಳದಲ್ಲಿ ಕಿರುಸೇತುವೆ ಮುಳುಗಡೆ
ನಿನ್ನೆ ಸುರಿದ ಧಾರಾಕಾರ ಮಳೆಗೆ ಧರ್ಮಸ್ಥಳ ಸಮೀಪದ ನೇತ್ರಾವತಿ ನದಿಗೆ ಮಣ್ಣುಪಳ್ಳ ಎಂಬಲ್ಲಿ ಕಟ್ಟಲಾಗಿರುವ ಕಿರುಸೇತುವೆ ಮುಳುಗಡೆಯಾಗಿದ್ದು, ಮುಖ್ಯರಸ್ತೆ ಮೇಲೆ ನೀರು ಹರಿದಿದ್ದು ಒಂದು ಗಂಟೆಗೂ ಅಧಿಕ ಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.