ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ಅಡಿಕೆ ಕದ್ದಿದ್ದಾನೆಂದು ಆರೋಪಿಸಿ ಬಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಸುಳ್ಯ ತಾಲೂಕು ಗುತ್ತಿಗಾರಿನ ಸಮೀಪದ ಪುರ್ಲುಮಕ್ಕಿಯಲ್ಲಿ ಕಳೆದ ವಾರ ಹಣ್ಣು ಅಡಿಕೆ ಕದ್ದಿದ್ದಾನೆ ಎಂದು ಆರೋಪಿಸಿ ಬಾಲಕನ ಮೇಲೆ ಹಲ್ಲೆ ನಡೆಸಿದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿತ್ತು. ಜೊತೆಗೆ ಹಲ್ಲೆ ನಡೆಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲ್ಲೆ ನಡೆಸಿದವರು ನಾಪತ್ತೆಯಾಗಿದ್ದಾರೆ ಎನ್ನಲಾಗ್ತಿದೆ.
ಹಲ್ಲೆಗೊಳಗಾದ ಬಾಲಕ ಈ ಕುರಿತು ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದ್ದು, ಹಲ್ಲೆ ನಡೆಸಿದ 10 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಈ ಬಗ್ಗೆ 'ಈಟಿವಿ ಭಾರತ'ದ ಜೊತೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಜಿಡಬ್ಲ್ಯೂಸಿ ಅಧ್ಯಕ್ಷ ರೆನಿ ಡಿಸೋಜ, ನಮಗೆ ದೊರೆತ ಮಾಹಿತಿ ಹಿನ್ನೆಲೆಯಲ್ಲಿ ಮಗುವನ್ನು ಮಾತನಾಡಿಸಿ ಆರೋಪಿಗಳ ವಿರುದ್ಧ ಜೆಜೆ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ತಿಳಿಸಲಾಗಿದೆ. ಬಾಲಕ ಈ ಕಳ್ಳತನ ಮಾಡಿದ್ದೇ ಆಗಿದ್ದಲ್ಲಿ ಆತನ ಮನಪರಿವರ್ತನೆ ಮಾಡುವ ಬದಲು ಹಲ್ಲೆ ಮಾಡಿರುವುದು ಅಪರಾಧ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೂ ತರಲಾಗುವುದು. ಒಂದು ವೇಳೆ ತನಿಖೆ ಸರಿಯಾದ ರೀತಿ ನಡೆಯದಿದ್ದರೆ ಇದೇ ತಿಂಗಳ 28 ರಂದು ಮಂಗಳೂರಿಗೆ ಆಗಮಿಸುವ ರಾಜ್ಯ ಮಕ್ಕಳ ಆಯೋಗದ ಅಧಿಕಾರಿಗಳ ಗಮನಕ್ಕೂ ತಂದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.