ಮಂಗಳೂರು : ಹಾವೇರಿಯ ಹಾನಗಲ್‌ನಲ್ಲಿ ನಡೆದ ಚುನಾವಣೆಯಲ್ಲಿ ಹಣ ಬಲ ಮತ್ತು ತೋಳ್ಬಲದ ನಡುವೆ ಕಾಂಗ್ರೆಸ್ ಪಕ್ಷ ಗೆಲುವಿನ ನಗೆ ಬೀರಿದೆ. ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಆಡಳಿತ ಯಂತ್ರವನ್ನು ಸಂಪೂರ್ಣ ದುರುಪಯೋಗ ಪಡಿಸಿಕೊಂಡು ಎಗ್ಗಿಲ್ಲದೆ ಪ್ರತೀ ಮನೆಗೆ 10 ಸಾವಿರ ರೂಪಾಯಿ ನೀಡಿದೆ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಿಹ್ನೆ ಸಹಿತ ಇರುವ ಕವರ್‌ಗಳಲ್ಲಿ ಹಣವನ್ನು ನೀಡಲಾಗಿದೆ ಎಂಬುದನ್ನು ನಾನು ಸಾಬೀತು ಪಡಿಸುತ್ತೇನೆ ಎಂದು ಹೇಳಿದರು.
'ನಾ ಖಾವೂಂಗ, ನಾ ಖಾನೇ ದೂಂಗಾ' ಎಂದು ಹೇಳಿರುವ ನಾಯಕರು ಇಷ್ಟು ಪ್ರಮಾಣದಲ್ಲಿ ಹಣ ಹಂಚಿರುವುದನ್ನು ನೋಡಿದರೆ ಅವರು ತಿನ್ನದೆ ಇರಲು ಸಾಧ್ಯವೇ? ಸಿಂದಗಿಯಲ್ಲೂ ನೀಡಲಾಗಿದೆ. ಆಡಳಿತ ಮಾಡುವವರ ವಿರುದ್ಧ ಪ್ರತಿಪಕ್ಷ ಮಾತನಾಡಬೇಕಾದುದು ಸಹಜಗುಣ. ಆದರೆ, ಮಾಧ್ಯಮ ಆಡಳಿತ ಪಕ್ಷವನ್ನು ಪ್ರಶ್ನಿಸಲೇಬೇಕು ಎಂದರು.
ವಿರೋಧ ಪಕ್ಷ ಪ್ರಶ್ನಿಸುವುದರಲ್ಲಿ ಅರ್ಥವಿಲ್ಲ : ತಪ್ಪು ಮಾಡುವಾಗ ಮೋದಿಯವರು ಹಾಗೂ ರಾಹುಲ್ ಗಾಂಧಿಯವರನ್ನು ತಾಳೆ ಮಾಡುವುದು ಸರಿಯಲ್ಲ. ಯಾಕೆಂದರೆ, ರಾಹುಲ್ ಗಾಂಧಿಯವರು ದೇಶದ ಪ್ರಧಾನಮಂತ್ರಿ ಅಲ್ಲ. ನಾವು ಪಿಎಂ, ಸಿಎಂ ಹಾಗೂ ಮುಖ್ಯಮಂತ್ರಿಯವರನ್ನು ಪ್ರಶ್ನಿಸಬೇಕು. ವಿರೋಧ ಪಕ್ಷದ ನಾಯಕನನ್ನು ಪ್ರಶ್ನೆ ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದು ಹೇಳಿದರು.
ಬಿಜೆಪಿ ಸೋಲಿಗೆ ಆಡಳಿತ ವೈಫಲ್ಯವೇ ಕಾರಣ : ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್ ಶಕ್ತಿಯನ್ನು ಕಳೆದುಕೊಂಡಿದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಆದರೆ, ಇಡೀ ದೇಶದಲ್ಲಿ ಕಾಂಗ್ರೆಸ್ ಪ್ರಮುಖ ವಿರೋಧ ಪಕ್ಷವೆನ್ನುವುದು ಸಾಬೀತಾಗಿದೆ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೂ ಲೋಕಸಭಾ ಸೀಟ್ ಸಹಿತ 3 ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್ ಗೆದ್ದಿದೆ.
ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಗೆದ್ದಿದೆ. ಬಿಹಾರ, ಮಹಾರಾಷ್ಟ್ರ ಮುಂತಾದೆಡೆ ಕಾಂಗ್ರೆಸ್ ಅಧಿಕಾರ ಹೊಂದಿದೆ. ಆದರೆ, ರಾಜ್ಯದ ಚುನಾವಣೆಯಲ್ಲಿ ಹಾನಗಲ್‌ನಲ್ಲಿ ಬಿಜೆಪಿ ಸೋಲಲು ಸರ್ಕಾರದ ಆಡಳಿತ ವೈಫಲ್ಯವೇ ಕಾರಣ ಎಂದು ರಮಾನಾಥ ರೈ ಹೇಳಿದರು.