ಮಂಗಳೂರು: ಹಿಂದೂ ಸಮಾಜ ರೊಚ್ಚಿಗೇಳುವ ಮೊದಲು ರಾಜ್ಯದಲ್ಲಿ ತಕ್ಷಣ ಮತಾಂತರ ವಿರೋಧಿ ಕಾನೂನು ಜಾರಿಯಾಗಲಿ ಎಂದು ಗುರುಪುರ ಶ್ರೀ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಆಗ್ರಹಿಸಿದರು.
ಮಂಗಳೂರಿನ ಗುಜ್ಜರಕೆರೆಯಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ತಕ್ಷಣ ಮತಾಂತರ ವಿರೋಧಿ ಕಾನೂನು ಜಾರಿಗೆ ತರಬೇಕು. ಎಲ್ಲರೂ ತಕ್ಷಣ ಜಾಗೃತರಾಗಿ ವಿಧಾನಸೌಧವನ್ನು ಮುಟ್ಟುವವರೆಗೆ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.
ಮಂಗಳೂರಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣದ ಹಿಂದೆ ಮತಾಂತರದ ಗುಮಾನಿಯಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ನಾಗೇಶ್, ಡೆತ್ ನೋಟ್ನಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಹಿಳೆಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಆದರೆ ಪ್ರಕರಣದ ತನಿಖೆ ಬರಿ ಆಕೆಯ ಸುತ್ತ ಸುತ್ತುತ್ತಿದೆಯೇ ವಿನಃ, ಭಿನ್ನ ಆಯಾಮವನ್ನು ತಳೆಯುತ್ತಿಲ್ಲ ಎಂದು ಆರೋಪಿಸಿದರು.
ಮತಾಂತರ ಪ್ರಕ್ರಿಯೆ ಇಂದು ಮೊನ್ನೆಯಿಂದ ನಡೆಯುತ್ತಿರುವುದಲ್ಲ. ಇದು ಗಲ್ಲಿಗಲ್ಲಿಗಳಲ್ಲಿ ರಾಜಾರೋಷವಾಗಿ ನಡೆಯುತ್ತಿದೆ. ಮತಾಂತರ ತಡೆಯುವ ಕಾನೂನು ಬಂದ್ರೆ ಕ್ರಿಶ್ಚಿಯನ್ ಪಾದ್ರಿಗಳಿಗೆ, ರಾಷ್ಟ್ರೀಯ ಪಕ್ಷವೊಂದರ ನಾಯಕರಿಗೆ ಯಾಕೆ ಭಯ ಎಂದು ಪ್ರಶ್ನಿಸಿದರು.
ಈ ವೇಳೆ ವಿಹಿಂಪ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್ ಮಾತನಾಡಿ, ಯಾವುದೇ ವ್ಯಕ್ತಿ ಸಾಯುವ ಕೊನೆ ಕ್ಷಣದಲ್ಲಿ ಸುಳ್ಳು ಮಾತನಾಡುವುದಿಲ್ಲ. ಮೃತ ನಾಗೇಶ್ ಸಾಯುವ ಮೊದಲು ಹೆಂಡತಿ - ಮಕ್ಕಳು ಮತಾಂತರದ ಸುಳಿವಿಗೆ ಸಿಕ್ಕಿದ್ದಾರೆ ಎಂದು ಡೆತ್ ನೋಟ್ ಬರೆದಿದ್ದಾನೆ. ತನ್ನ ಪತ್ನಿಯ ಸ್ನೇಹಿತೆ ಮತಾಂತರಕ್ಕೆ ಯತ್ನಿಸುತ್ತಿದ್ದಾಳೆ ಎಂದು ಬರೆದಿದ್ದಾನೆ. ಆದ್ದರಿಂದ ರಾಜ್ಯದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಗೊಳಿಸಲು ಬಜರಂಗದಳ, ವಿಶ್ವ ಹಿಂದೂ ಪರಿಷತ್ ಆಗ್ರಹಿಸುತ್ತಿದೆ ಎಂದು ಹೇಳಿದರು.