ಬೆಳ್ತಂಗಡಿ(ಮಂಗಳೂರು): ದುಷ್ಕರ್ಮಿಗಳು ಊಟಕ್ಕೆಂದು ಕುಳಿತಿದ್ದ ವೃದ್ಧೆಯನ್ನು ಹತ್ಯೆಗೈದು ಚಿನ್ನಾಭರಣ ದೋಚಿರುವ ಘಟನೆ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಕೆರೆಕೋಡಿ ಎಂಬಲ್ಲಿ ನಡೆದಿದೆ. ಗ್ರಾಮದ ನಿವಾಸಿ ಅಕ್ಕು (85) ಮೃತರು. ಹಾಡಹಗಲೇ ವೃದ್ಧೆಯ ಮೇಲೆ ಹಲ್ಲೆ ಮಾಡಿ ಅವರ ಚಿನ್ನಾಭರಣ ಹಾಗೂ ಮನೆಯಲ್ಲಿದ್ದ ನಗದು ದೋಚಿರುವ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದ ವೃದ್ಧೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಅಕ್ಕು ಅವರು ತಮ್ಮ ಮಗ ಡೀಕಯ್ಯ, ಸೊಸೆ ಲಲಿತಾ, ಮಗಳು ದೇವಕಿ ಹಾಗೂ ಮೊಮ್ಮಗಳೊಂದಿಗೆ ವಾಸವಿದ್ದರು. ಮಗ-ಸೊಸೆ ಕೆಲಸಕ್ಕೆ ಹೋಗಿದ್ದರು. ಮೊಮ್ಮಗಳು ಮಧ್ಯಾಹ್ನ ಶಾಲೆ ಬಿಟ್ಟು ಮನೆಗೆ ಬಂದು ಅಜ್ಜಿಯನ್ನು ಕೆರೆದಾಗ ಅವರು ಮನೆಯಲ್ಲಿ ಇರಲಿಲ್ಲ. ನಂತರ ಹೊರಗೆ ಬಂದು ನೋಡಿದಾಗ ಮನೆಯ ಸಮೀಪದ ಹಟ್ಟಿಯ ಹಿಂದೆ ಬಿದ್ದಿರುವುದು ಕಂಡುಬಂದಿದೆ.
ಬಳಿಕ ಬಾಲಕಿ ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ಅವರು ಬಂದು ನೋಡಿದಾಗ ಅಕ್ಕು ಅವರು ಚಿಂತಾಜನಕ ಸ್ಥಿತಿಯಲ್ಲಿ ಒದ್ದಾಡುತಿದ್ದರು. ತಕ್ಷಣ ಆಸ್ಪತ್ರೆಗೆ ಕೊಂಡು ಹೋಗಲು ವಾಹನಕ್ಕೆ ತಿಳಿಸಿದರೂ ವಾಹನ ಬರುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ. ಮೃತದೇಹವನ್ನು ಪರಿಶೀಲಿಸಿದಾಗ ಕಿವಿಯಲ್ಲಿದ್ದ ಚಿನ್ನಾಭರಣ ಹಾಗೂ ಮನೆಯಲ್ಲಿದ್ದ ನಗದು ದರೋಡೆ ಮಾಡಿರುವುದು ಗೊತ್ತಾಗಿದೆ. ಘಟನೆ ಸಂಬಂಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಬಂದ ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳದ ಮೂಲಕ ಪರಿಶೀಲನೆ ನಡೆಸಿ ಮೃತದೇಹವನ್ನು ಬೆಳ್ತಂಗಡಿ ಶವಾಗಾರಕ್ಕೆ ಸಾಗಿಸಿದ್ದಾರೆ.
ಆರೋಪಿ ಬಂಧನ: ವೃದ್ಧೆ ಕೊಲೆಗೈದು ಚಿನ್ನಾಭರಣ ದೋಚಿದ ಆರೋಪದಡಿ ಅಶೋಕ ಎಂಬವನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಶನಿವಾರ ಮಧ್ಯಾಹ್ನ ಘಟನೆಯ ನಂತರ ರಸ್ತೆಯಲ್ಲಿ ನಡೆದುಕೊಂಡು ಬೆಳಾಲಿಗೆ ಹೋಗುವುದನ್ನು ವ್ಯಕ್ತಿಯೊಬ್ಬರು ನೋಡಿದ್ದಾರೆ. ಈ ಬಗ್ಗೆ ಸಂಶಯಗೊಂಡ ಅವರು ಮನೆಯವರಿಗೆ ಮಾಹಿತಿ ನೀಡಿದಾಗ ಅವರು ಫೋನ್ ಮಾಡಿ ಎಲ್ಲಿದ್ದಿ ಎಂದು ವಿಚಾರಿಸಿದಾಗ ನಾರಾವಿಯಲ್ಲಿ ಇದ್ದೇನೆ ಎಂಬ ಸುಳ್ಳು ಮಾಹಿತಿಯನ್ನು ನೀಡಿದ್ದಾನೆ. ಇದರಿಂದ ಇನ್ನಷ್ಟು ಅನುಮಾನಗೊಂಡ ಮನೆಯವರು ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಫೋನ್ ಲೊಕೇಶನ್ ಪರೀಕ್ಷಿಸಿದಾಗ ಸಮೀಪದಲ್ಲೇ ಸುತ್ತಾಡಿದ ಮಾಹಿತಿ ಲಭ್ಯವಾಗಿದೆ.
ಸಂಬಂಧಿಯಿಂದಲೇ ಕೃತ್ಯ: ವೃದ್ಧೆಯ ಸಂಬಂಧಿಯಾಗಿದ್ದ ಆತ ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಐಸ್ ಕ್ರೀಮ್ ವಾಹನ ಒಂದರಲ್ಲಿ ಕೆಲಸ ಮಾಡುತ್ತಿದ್ದ ಈತ ಕುಡಿತದ ದಾಸನಾಗಿದ್ದ. ಮನೆಯವರ ಚಲನವಲನದ ಬಗ್ಗೆ ಅರಿವಿದ್ದ ಈತ ಮನೆಯವರು ಕೆಲಸಕ್ಕೆ ಹಾಗೂ ಮಕ್ಕಳು ಶಾಲೆಗೆ ಹೋಗಿದ್ದ ಸಮಯ ನೋಡಿ ಕೃತ್ಯ ಎಸಗಿದ್ದಾನೆ ಎನ್ನಲಾಗ್ತಿದೆ.
ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಿದ ದರೋಡೆ: ಚಿತ್ರದುರ್ಗ ಪೊಲೀಸರಿಂದ ಕಣ್ಗಾವಲು!