ಮಂಗಳೂರು: ನಾಡಿನಾದ್ಯಂತ ಸಮಸ್ತ ಮುಸ್ಲಿಂ ಬಾಂಧವರು, ಈದ್ ಉಲ್ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ನಗರದ ಬಾವುಟಗುಡ್ಡೆಯಲ್ಲಿರುವ ಈದ್ಗಾ ಮಸೀದಿಯಲ್ಲಿ ಸಾವಿರಾರು ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭ ಶಾಸಕ ಯು ಟಿ ಖಾದರ್ ಮಾತನಾಡಿ, ನಾಡಿನ ಸರ್ವ ಜನರಿಗೂ ಈದ್ ಹಬ್ಬದ ಶುಭಾಶಯಗಳು. ತ್ಯಾಗ, ಬಲಿದಾನ, ವಿಶ್ವಾಸದ ಮುಖಾಂತರ ನೆಮ್ಮದಿಯ ಜೀವನವನ್ನು ನಡೆಸುವ ಸಂದೇಶವನ್ನು ಈದ್ ಹಬ್ಬ ಕೊಡುತ್ತದೆ. ಈ ಪ್ರವಿತ್ರವಾದ ದಿನದಲ್ಲಿ ಪವಿತ್ರವಾದ ಮೆಕ್ಕಾ-ಮದೀನಾದಲ್ಲಿ ಹಜ್ನ ನಿರ್ವಹಿಸಿದ ಸಂದರ್ಭದಲ್ಲಿ ಧಾರ್ಮಿಕವಾಗಿ ವಿಶ್ವಕ್ಕೆ ಇಂದು ಪವಿತ್ರವಾದ ಸಂದೇಶ ತಲುಪಿದೆ ಎಂದು ಹೇಳಿದರು.
ಎಲ್ಲರೂ ಶಾಂತಿ-ಸಹೋದರತೆಯಿಂದ, ಪ್ರೀತಿ-ವಿಶ್ವಾಸದಿಂದ, ಪರಸ್ಪರ ಮನುಷ್ಯತ್ವದ ಮುಖಾಂತರ ಜೀವನ ಸಾಗಿಸುವ ಮನೋಭಾವವನ್ನು ಈ ಹಬ್ಬವು ಕೊಡುತ್ತದೆ. ಆದ್ದರಿಂದ ನಮ್ಮ ಹಬ್ಬವನ್ನು ನಾವು ಆಚರಿಸಿ, ಇನ್ನಿತರ ಧರ್ಮದವರಿಗೂ ಇದರ ಸಂದೇಶದ ಸಾರವನ್ನು ತಿಳಿಸಿಕೊಡಬೇಕು. ಬಲಿಷ್ಠ ಭಾರತದ ನಿರ್ಮಾಣವೇ ನಮ್ಮ ಎಲ್ಲಾ ಹಬ್ಬಗಳ ಗುರಿಯಾಗಿದೆ ಎಂದರು.
ಪ್ರಕೃತಿ ವಿಕೋಪವಾದಂತಹ ಈ ಕಾಲಘಟ್ಟದಲ್ಲಿ ಯಾರೆಲ್ಲಾ ನೋವಿನಲ್ಲಿದ್ದಾರೆಯೋ, ಅವರ ನೋವೆಲ್ಲಾ ದೂರವಾಗಲು ಮಂಗಳೂರು ಖಾಜಿಯವರು ವಿಶೇಷ ಪ್ರಾರ್ಥನೆಯನ್ನು ಮಾಡಿದ್ದಾರೆ. ಎಲ್ಲರ ಕಷ್ಟವೂ ದೂರವಾಗಿ ಸಂತೋಷ-ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂದು ಖಾದರ್ ಹಾರೈಸಿದರು.