ಮಂಗಳೂರು: ಯುವತಿಯೊಬ್ಬಳು ಮುಂಬೈಗೆ ಪ್ರಯಾಣಿಸುತ್ತಿದ್ದ ತನ್ನ ಗೆಳೆಯನಿಗೆ You are a Bomber ಎಂದು ಮಾಡಿದ ಮೆಸೇಜ್ ವಿಮಾನ ನಿಲ್ದಾಣದಲ್ಲಿ ಆತಂಕ ನೆಲೆಸಲು ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರ ಪ್ರದೇಶದ ಗಾಜಿಯಾಬಾದ್ನ ಇಂದಿರಪುರಂ ತಾಲೂಕಿನ ಸಿಮ್ರಾನ್ ಟಾಮ್ (23) ಮತ್ತು ಗಾಜಿಯಾಬಾದ್ನ ಸಾಹಿಬಬಾದ್ ತಾಲೂಕಿನ ದಿಪಯಾನ್ ಮಾಂಜಿ (23) ಎಂಬಿಬ್ಬರು ಮಾಡಿದ ವಾಟ್ಸ್ ಆ್ಯಪ್ ಮೆಸೇೆಜ್ ಆತಂಕಕ್ಕೆ ತಳ್ಳಿತ್ತು.
ದಿಪಯಾನ್ ಮಾಂಜಿ ಮಣಿಪಾಲ ಐಐಟಿಯಲ್ಲಿ 2021 ರಲ್ಲಿ ವ್ಯಾಸಂಗ ಮಾಡಿದ್ದು, ಸಿಮ್ರಾನ್ ಟಾಮ್ ಜೊತೆಗೆ ಮಣಿಪಾಲಕ್ಕೆ ಬಂದಿದ್ದರು. ದಿಪಯಾನ್ ಮಾಂಜಿ ಗುಜರಾತ್ನ ವಡೋದರದಲ್ಲಿ ಎಲ್ ಆ್ಯಂಡ್ ಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಸಿಮ್ರಾನ್ ಟಾಮ್ ಚೆನ್ನೈ ಗೋಪಲಪುರಂನಲ್ಲಿ ಸೆಲ್ವ ಮೇರಿಸ್ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಎ. ( ಹೆಚ್ಆರ್) ವ್ಯಾಸಂಗ ಮಾಡುತ್ತಿದ್ದಾರೆ.
ನಿನ್ನೆ ಸಿಮ್ರಾನ್ ಟಾಮ್ ಬೆಂಗಳೂರು ತೆರಳಿ ಅಲ್ಲಿಂದ ಚೆನ್ನೈಗೆ ಹೋಗಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ದಿಪಯಾನ್ ಮಾಂಜಿ ಮುಂಬೈಗೆ ತೆರಳಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ. ದಿಪಯಾನ್ ಮಾಂಜಿ ಮುಂಬೈಗೆ ಹೋಗುವ ಇಂಡಿಗೋ ವಿಮಾನದಲ್ಲಿ ಕುಳಿತುಕೊಂಡು ಸಿಮ್ರಾನ್ ಟಾಮ್ ಗೆ ವಾಟ್ಸ್ಆ್ಯಪ್ ಚಾಟಿಂಗ್ ಮಾಡುತ್ತಿದ್ದ.
ಈ ವೇಳೆ ಆಕೆ you are a bomber ಎಂದು ಮೆಸೇಜ್ ಮಾಡಿದ್ದಾಳೆ. ಇವರು ಮಾಡುತ್ತಿದ್ದ ಚಾಟ್ನ್ನು ವಿಮಾನದಲ್ಲಿ ದಿಪಯಾನ್ ಮಾಂಜಿಯ ಹಿಂಬದಿಯ ಸೀಟಿನಲ್ಲಿದ್ದ ಯುವತಿಯೊಬ್ಬಳು ಗಮನಿಸಿ ಸಿಬ್ಬಂದಿಗೆ ತಿಳಿಸಿದ್ದರು. ವಿಮಾನ ಸಿಬ್ಬಂದಿ ಈ ವಿಚಾರವನ್ನು ಇಂಡಿಗೋ ಸಂಸ್ಥೆಯ ಮ್ಯಾನೇಜರ್. ಕೆ.ಪಿ ಬೋಪಣ್ಣ ಅವರಿಗೆ ತಿಳಿಸಿದ್ದಾರೆ.
ಕೂಡಲೇ ಅವರು ಸಿಐಎಸ್ಎಫ್, ಬಿಡಿಡಿಎಸ್, ಇಂಡಿಗೋ ಸೆಕ್ಯುರಿಟಿ ಮತ್ತು ತಾಂತ್ರಿಕ ಸಿಬ್ಬಂದಿ ಸಹಕಾರದಿಂದ ವಿಮಾನದ ಪ್ರಯಾಣಿಕರನ್ನು ಮತ್ತು ಲಗೇಜ್ ಗಳನ್ನು ತಪಾಸಣೆ ನಡೆಸಿದ್ದಾರೆ. ಆ ಬಳಿಕ ಸಿಐಎಸ್ಎಫ್ ಸಿಬ್ಬಂದಿ ದಿಪಯಾನ್ ಮಾಂಜಿ ಮತ್ತು ಸಿಮ್ರಾನ್ ಟಾಮ್ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಆಂಟಿಲಿಯಾ ಪ್ರಕರಣದ ಬಳಿಕ ಮತ್ತೆ ಅಂಬಾನಿ ಕುಟುಂಬಕ್ಕೆ ಬೆದರಿಕೆ ಕರೆ