ಮಂಗಳೂರು: ಬಪ್ಪನಾಡು ದೇವಸ್ಥಾನದ ಜಾತ್ರೋತ್ಸವದಲ್ಲಿ ಹಿಂದೂಯೇತರರಿಗೆ ವ್ಯಾಪಾರ ನಿರಾಕರಿಸಿರುವ ವಿವಾದಿತ ಬ್ಯಾನರ್ ಅನ್ನು ಜಿಲ್ಲಾಡಳಿತ ಇನ್ನೂ ತೆರವು ಮಾಡಿಲ್ಲ. ಅಧಿಕಾರಿ ವರ್ಗವೇ ಇದಕ್ಕೆ ಕುಮ್ಮಕ್ಕು ನೀಡುತ್ತಿದೆಯೇ ಎಂಬ ಶಂಕೆ ಮೂಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಮಿಥುನ್ ರೈ ಆರೋಪಿಸಿದ್ದಾರೆ. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಅವರು ಮಾತನಾಡಿದರು.
ಬಪ್ಪನಾಡು ಶ್ರೀಕ್ಷೇತ್ರ ಜಿಲ್ಲೆಯಲ್ಲಿ ಕೋಮು ಸಾಮರಸ್ಯಕ್ಕೆ ಹೆಸರುವಾಸಿಯಾದ ದೇವಸ್ಥಾನ. ಇಲ್ಲಿನ ಆಡಳಿತ ಮಂಡಳಿ ತಾವು ಈ ಬ್ಯಾನರ್ ಹಾಕಿಲ್ಲ. ಯಾವ ಮುಸ್ಲಿಮರಿಗೂ ವ್ಯಾಪಾರ ಮಾಡಲು ಅವಕಾಶ ನಿರಾಕರಿಸಿಲ್ಲ ಎಂದು ಹೇಳುತ್ತಿದೆ. ಆದರೆ, ಈ ಬಗ್ಗೆ ಜಿಲ್ಲಾಡಳಿತ ಮೌನ ವಹಿಸಿದೆ. ತಕ್ಷಣ ಇಂತಹ ಕೃತ್ಯಗಳಿಗೆ ಜಿಲ್ಲಾಡಳಿತ ಕಡಿವಾಣ ಹಾಕಬೇಕು, ಇಲ್ಲದಿದ್ದಲ್ಲಿ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಹಿಜಾಬ್ ಹೈಕೋರ್ಟ್ ತೀರ್ಪು ಖಂಡಿಸಿ ನಡೆಸಿದ ಮುಸ್ಲಿಮರ ಬಂದ್ ವಿಚಾರಕ್ಕೆ ಪ್ರತೀಕಾರವಾಗಿ ಈ ವ್ಯಾಪಾರ ನಿರಾಕರಣೆ ಮಾಡಲಾಗುತ್ತದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಹೈಕೋರ್ಟ್ ತೀರ್ಪಿಗೆ ನಾವು ಬದ್ಧರಾಗಿದ್ದೇವೆ. ಎಲ್ಲರೂ ಕೋರ್ಟ್ ತೀರ್ಪನ್ನು ಒಪ್ಪಲೇಬೇಕು ಎಂದರು.
ಇದನ್ನೂ ಓದಿ: ದೇವಾಲಯ ವ್ಯಾಪ್ತಿಯಲ್ಲಿ ಹಿಂದೂಯೇತರ ವರ್ತಕರ ನಿರ್ಬಂಧಿಸಿದವರ ವಿರುದ್ಧ ಕ್ರಮ ಅಸಾಧ್ಯ: ಮಾಧುಸ್ವಾಮಿ