ಮಂಗಳೂರು: ಯಡಿಯೂರಪ್ಪ ಕೇಂದ್ರ ಸರಕಾರಕ್ಕೆ ಒಲ್ಲದ ಶಿಶು, ಕೇಂದ್ರದವರ ಇಚ್ಛೆಗೆ ವಿರುದ್ಧವಾದ ಮುಖ್ಯಮಂತ್ರಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ, ಅಮಿತ್ ಷಾ ಅವರಿಗೆ ಯಡಿಯೂರಪ್ಪ ಮುಖ್ಯಮಂತ್ರಿ ಆಗೋದು ಇಷ್ಟವಿರಲಿಲ್ಲ. ವಿಧಿ ಇಲ್ಲದೇ ಅನಿವಾರ್ಯವಾಗಿ ಯಡಿಯೂರಪ್ಪ ಪಕ್ಷಬಿಟ್ಟು ಹೋಗುತ್ತಾರೆಂದು ಮುಖ್ಯಮಂತ್ರಿ ಮಾಡಿದ್ದಾರೆ ಎಂದರು.
ಸಂತೋಷ್ ಹತ್ತಿರ ರಿಮೋಟ್ ಕಂಟ್ರೋಲ್ ಇದೆ. ಯಡಿಯೂರಪ್ಪ ಅವರದ್ದು ಏನೂ ನಡೆಯೋದಿಲ್ಲ. ಸಂತೋಷ್ ಸ್ವಿಚ್ ಹಾಕಿದ ಕೂಡಲೇ ನಳಿನ್ ಕುಮಾರ್ ಡ್ಯಾನ್ಸ್ ಮಾಡುತ್ತಾರೆ, ಇದು ರಾಜ್ಯದ ಪರಿಸ್ಥಿತಿ. ಬಿಜೆಪಿಯವರು ರಾಜ್ಯದಲ್ಲಿಯೂ ಏನು ಕೆಲಸ ಮಾಡಿಲ್ಲ, ಕೇಂದ್ರದಲ್ಲಿಯೂ ಏನೂ ಕೆಲಸ ಮಾಡಿಲ್ಲ. ನನ್ನ ಪ್ರಕಾರ ಯಡಿಯೂರಪ್ಪ ಡಿಸೆಂಬರ್ ಅಥವಾ ಜನವರಿ, ಫೆಬ್ರವರಿಯಲ್ಲಿ ಇದ್ರೆ ಹೆಚ್ಚು. ಆ ಬಳಿಕ ಮತ್ತೆ ಚುನಾವಣೆ ನಡೆಯುತ್ತೆ, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ನೂರಕ್ಕೆ ನೂರು ನಂಬಿಕೆ ಇದೆ. ಎಲ್ಲಾ ಕಡೆಗಳಲ್ಲಿಯೂ ನಾನು ಪ್ರವಾಸ ಮಾಡಿರುವಾಗ ಜನರು ಕಾಂಗ್ರೆಸ್ ಸರ್ಕಾರವನ್ನು ಜ್ಞಾಪಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.