ಉಳ್ಳಾಲ : ಕೂಲಿ ಕೆಲಸಕ್ಕೆಂದು ಕೇರಳಕ್ಕೆ ತೆರಳಿದ್ದ ಸಿಎಂ ಸ್ವಕ್ಷೇತ್ರದ ಕುಟುಂಬವೊಂದು ಲಾಕ್ಡೌನ್ನಿಂದಾಗಿ ತಲಪಾಡಿಯಲ್ಲಿ ಸಿಲುಕಿತ್ತು. ಈ ಪೈಕಿ ಗರ್ಭಿಣಿಯೊಬ್ಬರು ಆಹಾರವಿಲ್ಲದೆ ಪರದಾಡುತ್ತಿದ್ದ ವಿಷಯ ತಿಳಿದ ಸಿಎಂ ಬಿ. ಎಸ್. ಯಡಿಯೂರಪ್ಪ ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸಿ ಅವರನ್ನು ಸುರಕ್ಷಿತವಾಗಿ ಮನೆ ಸೇರಿಸಿದ್ದಾರೆ.
ಶಿಕಾರಿಪುರ ತಾಲೂಕಿನ ಕಲಾವತಿ ಮೂರು ತಿಂಗಳ ಗರ್ಭಿಣಿ. ಉಪ್ಪಳದಲ್ಲಿ ಕೂಲಿ ಕೆಲಸಕ್ಕೆಂದು ತೆರಳಿ ಎರಡು ತಿಂಗಳಿನಿಂದ ಅಲ್ಲೇ ನೆಲೆಸಿದ್ದರು. ಲಾಕ್ ಡೌನ್ ಘೋಷಣೆಯಾದ ಹಿನ್ನೆಲೆ ಕೆಲಸವಿಲ್ಲದೆ ಮನೆ ಸೇರುವ ಪ್ರಯತ್ನ ನಡೆಸಿದ್ದರು. ಅಲ್ಲದೆ ಸುಡು ಬಿಸಿಲಿನಲ್ಲಿ ರೈಲ್ವೇ ಹಳಿಯ ಮೂಲಕ ಗರ್ಭಿಣಿ ಸಹಿತ ಕುಟುಂಬ ಸುಮಾರು 20 ಕಿ.ಮೀ ನಡೆದುಕೊಂಡೇ ಸಾಗಿತ್ತು.
ಆದರೆ ತಲಪಾಡಿ ಪ್ರವೇಶಿಸುತ್ತಿದ್ದಂತೆ ತಡೆಹಿಡಿದ ರೈಲ್ವೇ ಪೊಲೀಸರು ಮುಂದೆ ಹೋಗಲು ಬಿಡಲಿಲ್ಲ. ವಾಪಸ್ಸು ಕೇರಳಕ್ಕೆ ಹೋಗುವಂತೆ ಸೂಚಿಸಿದರೂ, ಕುಟುಂಬಕ್ಕೆ ಅಲ್ಲಿ ನೆಲೆಯಿಲ್ಲದೇ ರಸ್ತೆ ಬದಿಯಲ್ಲೇ ಉಳಿಯಲು ನಿರ್ಧರಿಸಿತ್ತು. ಆದರೆ ಸ್ಥಳೀಯ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳು ಸೇರಿ ಗರ್ಭಿಣಿಯಿದ್ದ ಕುಟುಂಬವನ್ನು ಕೇರಳದ ಕುಂಜತ್ತೂರು ಗ್ರಾಮಕ್ಕೆ ಸೇರಿದ ಮರಿಯಾಶ್ರಮ ಶಾಲೆಯಲ್ಲಿ ಇರಿಸಿದ್ದರು.
ಸ್ಥಳೀಯರು ಮೂರು ಹೊತ್ತಿನ ಊಟ ಪೂರೈಸುತ್ತಿದ್ದರು. ಆದರೆ ಕರ್ನಾಟಕ ಮೂಲದವರಾದ ಕಾರಣ ಗರ್ಭಿಣಿಗೆ ಇಲ್ಲಿನ ಆಹಾರ ತಿನ್ನಲಾಗುತ್ತಿರಲಿಲ್ಲ. ಇದರಿಂದ ದಿನದಲ್ಲಿ ಒಂದು ಬಾರಿ ಊಟ ನಡೆಸಿ, ಸ್ಥಳೀಯರಲ್ಲಿ ತಮ್ಮನ್ನು ಊರಿಗೆ ಸೇರಿಸುವಂತೆ ಕಳೆದ 20 ದಿನಗಳಿಂದ ಅಲವತ್ತುಕೊಳ್ಳುತ್ತಿದ್ದರು.
ಇನ್ನು ಕ್ವಾರಂಟೈನ್ ಅವಧಿ ಮುಗಿದರೂ ಊರಿಗೆ ತೆರಳಲು ದ.ಕ. ಜಿಲ್ಲಾಡಳಿತ ಕ್ರಮಕೈಗೊಳ್ಳದ ಹಿನ್ನೆಲೆ, ಬುಧವಾರ ಸಾಮೂಹಿಕ ಆತ್ಮಹತ್ಯೆ ನಡೆಸುವ ಬೆದರಿಕೆ ಒಡ್ಡಿದ್ದರು. ಈ ಕುರಿತು ಸ್ಥಳೀಯ ಚಾನೆಲ್ನಲ್ಲಿ ಸುದ್ಧಿ ಪ್ರಸಾರವಾಗುತ್ತಿದ್ದಂತೆ, ಮುಖ್ಯಮಂತ್ರಿ ಆಪ್ತಕಾರ್ಯದರ್ಶಿ ಬಸವರಾಜ್ ಕರೆ ಮಾಡಿ ಕುಟುಂಬವನ್ನು ಊರಿಗೆ ತಲುಪಿಸುವ ಭರವಸೆ ನೀಡಿದ್ದರು.
ಭರವಸೆ ನೀಡಿದ ಒಂದು ಗಂಟೆಯೊಳಗೆ ಕಾರ್ಮಿಕರಿಗೆ ಕೆಎಸ್ಆರ್ಟಿಸಿ ಬಸ್ ಕಳುಹಿಸಿರುವುದಲ್ಲದೆ, ಖುದ್ದು ಅಲ್ಲಿನ ಸಂಸದ ಬಿ. ವೈ. ರಾಘವೇಂದ್ರ ಅವರು ಕುಟುಂಬದ ಜತೆಗೆ ಮಾತನಾಡಿ ಪ್ರಯಾಣದ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದ್ದರು. ಅದರಂತೆ ಇಂದು ಬೆಳಿಗ್ಗೆ ಗರ್ಭಿಣಿ ಸಹಿತ ಕುಟುಂಬ ಸುರಕ್ಷಿತವಾಗಿ ಮನೆ ತಲುಪಿದೆ.