ಮಂಗಳೂರು: ನಗರದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪ ಪಡೆದಿದ್ದು, ಪರಿಸ್ಥಿತಿ ಹತೋಟಿಗೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಮಧ್ಯಾಹ್ನ ಎರಡು ಗಂಟೆಗೆ ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಳಿ ಏಕಾಏಕಿ ಆರಂಭವಾದ ಹಿಂಸಾಚಾರದ ಹಿನ್ನೆಲೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅಲ್ಲದೆ ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಎಷ್ಟು ಪ್ರಯತ್ನಿಸಿದರೂ ಪ್ರತಿಭಟನಾಕಾರರ ಆಕ್ರೋಶ ಮತ್ತಷ್ಟು ಮುಂದುವರಿದಿದೆ.
ಬಂದರು ಪ್ರದೇಶದಲ್ಲಿ ಉದ್ರಿಕ್ತರು ಗುಂಪು ಗುಂಪಾಗಿ ಪೊಲೀಸರತ್ತ ಕಲ್ಲು ತೂರಾಟ ನಡೆಸುತ್ತಿದ್ದರು, ಅಲ್ಲದೆ ಟೈರ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಮಾಜಿ ಮೇಯರ್ ಅಶ್ರಫ್, ಎಸ್ಡಿಪಿಐ ಮುಖಂಡ ಅಥಾವುಲ್ಲಾ ಇನ್ನಿತರ ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಆದರೂ ಪರಿಸ್ಥಿತಿ ಸಂಜೆ 6ರವರೆಗೆ ತಹಬದಿಗೆ ಬಂದಿಲ್ಲ. ಈ ಹಿನ್ನೆಲೆ ನಗರ ಪೊಲೀಸ್ ವ್ಯಾಪ್ತಿಯ ನಾಲ್ಕು ಕಡೆಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.
ಈ ಹಿಂಸಾಚಾರದಲ್ಲಿ ಮಂಗಳೂರಿನ ಮಾಜಿ ಮೇಯರ್ ಅಶ್ರಫ್ ಸೇರಿ ನಾಲ್ಕು ಮಂದಿಗೆ ಗಾಯಗಳಾದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಗಾಯಾಳುಗಳಲ್ಲಿ ಮೂವರನ್ನು ಯುನಿಟಿ ಆಸ್ಪತ್ರೆ ಹಾಗೂ ಓರ್ವನನ್ನು ಐಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಮುನ್ನೆಚ್ಚರಿಕಾ ದೃಷ್ಟಿಯಿಂದ ಮಧ್ಯಾಹ್ನದ ಬಳಿಕವೇ ಜಿಲ್ಲಾಧಿಕಾರಿ ಕಚೇರಿಯ ಬಳಿಯ ಅಂಗಡಿ ಮುಂಗ್ಗಟ್ಟು, ಮೀನು ಮಾರುಕಟ್ಟೆ ಮುಚ್ಚಲಾಗಿದೆ. ಅಲ್ಲದೆ ಸ್ಟೇಟ್ ಬ್ಯಾಂಕ್ ಬಳಿಯ ಬಸ್ ನಿಲ್ದಾಣಕ್ಕೆ ಬಸ್ ಬರುವುದನ್ನು ಸ್ಥಗಿತಗೊಳಿಸಲಾಗಿದೆ. ಒಟ್ಟಿನಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಮಂಗಳೂರಿನ ಉದ್ವಿಗ್ನ ಸ್ಥಿತಿ ರಾತ್ರಿಯೂ ಮುಂದುವರಿಯಲಿದೆ.
![citizenship amendment bill protest in mangalore](https://etvbharatimages.akamaized.net/etvbharat/prod-images/5428994_430_5428994_1576765688248.png)
ರಜೆ ಘೋಷಣೆ
ಪ್ರತಿಭಟನೆ ಹಿಂಸಾಚಾರ ರೂಪ ಪಡೆದ ಹಿನ್ನೆಲೆ ಮುಂಜಾಗೃತ ಕ್ರಮವಾಗಿ ನಗರ ವ್ಯಾಪ್ತಿಯ ಅಂಗನವಾಡಿ ಕೇಂದ್ರ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ, ಐಟಿಐ, ಡಿಪ್ಲೊಮಾ, ವೃತ್ತಿಪರ ಕೋರ್ಸ್ ಹಾಗೂ ಪದವಿ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ. ಮಂಗಳೂರು ನಗರದಲ್ಲಿ ಕರ್ಫೂ ವಿಧಿಸಲಾಗಿದ್ದು, ನಾಳೆಯೂ ಹಿಂಸಾಚಾರ ನಡೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ದ. ಕ. ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ರಜೆ ಘೋಷಿಸಿ ಆದೇಶಿಸಿದ್ದಾರೆ.