ನೆಲ್ಯಾಡಿ: ಪಂಜ ಅರಣ್ಯ ಇಲಾಖಾ ವ್ಯಾಪ್ತಿಯಲ್ಲಿ ಬರುವ ನೆಲ್ಯಾಡಿ ಪಾಂಡಿಬೆಟ್ಟು ಚಾಕೋಟೆಕರೆ ಎಂಬಲ್ಲಿ ಚಿರತೆಯನ್ನು ಹೋಲುವ ಪ್ರಾಣಿ ಕಾಣಿಸಿಕೊಂಡಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸುದ್ದಿ ಹಬ್ಬಿರುವ ಹಿನ್ನೆಲೆ ಅರಣ್ಯ ಇಲಾಖೆ ವತಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಬೋನು ಇರಿಸಲಾಗಿದೆ.
ಕಳೆದ ಮೂರು ದಿನಗಳಿಂದ ಚಿರತೆ ತರಹದ ಪ್ರಾಣಿ ನೆಲ್ಯಾಡಿ ಚಾಕೋಟೆಕೆರೆ ಪರಿಸರದಲ್ಲಿ ಕಂಡುಬಂದಿದೆ ಎನ್ನಲಾಗಿದ್ದು, ಸಾರ್ವಜನಿಕರು, ಶಾಲಾ ಮಕ್ಕಳು ಭಯಬೀತರಾಗಿದ್ದಾರೆ. ಅಲ್ಲದೆ ಇಂದು ಉಪ್ಪಿನಂಗಡಿ ಅರಣ್ಯ ಇಲಾಖೆಯ ವ್ಯಾಪ್ತಿಯ ಗೋಳಿತ್ತೊಟ್ಟುವಿನಲ್ಲಿ ಈ ಪ್ರಾಣಿ ಕಾಣಿಸಿದೆ ಎಂಬ ಮಾಹಿತಿ ಲಭಿಸಿದೆ.
ಪಂಜ ವಲಯದ ನೆಲ್ಯಾಡಿ ಚಾಕೋಟೆಕರೆ ಎರಡು ಕಡೆಗಳಲ್ಲಿ ಬೋನು ಇರಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪಂಜ ಉಪ ವಲಯ ಅರಣ್ಯಾಧಿಕಾರಿ ಸುನಿಲ್, ಸಾರ್ವಜನಿಕರು ಚಿರತೆಯನ್ನು ಹೋಲುವ ಪ್ರಾಣಿ ಕಂಡಿರುವ ಬಗ್ಗೆ ಮಾಹಿತಿ ನೀಡಿದ್ದು, ಇಲಾಖೆಯ ವತಿಯಿಂದ ಈಗಾಗಲೇ ಅರಣ್ಯದಲ್ಲಿ ಹುಡುಕಾಟ ನಡೆಸಲಾಗಿದೆ.
ಆದರೆ ನಮಗೆ ಯಾವುದೇ ಸುಳಿವು ಲಭ್ಯವಾಗಿಲ್ಲ. ಆದರೂ ಇಲಾಖೆ ಕಡೆಯಿಂದ ಸಾರ್ವಜನಿಕರು ಮಾಹಿತಿ ನೀಡಿದ ಕಡೆಗಳಲ್ಲಿ ಬೋನು ಇರಿಸಲಾಗಿದೆ. ಇಲಾಖೆ ಸಾರ್ವಜನಿಕರ ಸಹಕಾರಕ್ಕೆ ಸದಾ ಸನ್ನದ್ಧವಾಗಿದೆ. ಭಯ ಪಡುವ ಅಗತ್ಯ ಇಲ್ಲ ಎಂದಿದ್ದಾರೆ.