ಸುಳ್ಯ(ದಕ್ಷಿಣ ಕನ್ನಡ): ಎಲ್ಲೆಡೆಯೂ ಜನ ಪ್ರತಿನಿಧಿಗಳಿಗೆ ಅಭಿನಂದನೆಯ ಬ್ಯಾನರ್ ಕಾಣುತ್ತದೆ. ಆದರೆ, ಗುತ್ತಿಗಾರಿನ ಕಮಿಲದಲ್ಲಿ ರಸ್ತೆ ಅಭಿವೃದ್ಧಿ ಪೂರ್ಣಗೊಂಡ ಹಿನ್ನೆಲೆ ಜನರಿಗೆ ಹಾಗೂ ಮತದಾರರಿಗೆ ಅಭಿನಂದನೆ ಹಾಗೂ ಕೃತಜ್ಞತೆ ಬ್ಯಾನರ್ ಅಳವಡಿಸಿರುವುದು ಕಂಡು ಬಂದಿದೆ. ಚುನಾವಣೆ ನಂತರ ಜನರನ್ನು ಮರೆಯುವ ಈ ಕಾಲದಲ್ಲಿ ಕೆಲಸದ ಬಳಿಕವೂ ಜನರನ್ನು ನೆನಪಿಸಿಕೊಂಡದ್ದು, 'ಕಮಿಲ ಮೊಗ್ರದ ಗ್ರಾಮ ಭಾರತ' ಎಂಬ ತಂಡ.
ಜನರಿಂದಲೇ ಆಯ್ಕೆಯಾದ ಜನಪ್ರತಿನಿಧಿಗಳು ಜನರ ಮೂಲ ಸಮಸ್ಯೆಯನ್ನು ಗುರುತಿಸಿ ಪರಿಹರಿಸಿಕೊಡಬೇಕಾದ್ದು ಪ್ರಜಾಪ್ರಭುತ್ವದ ಒಂದು ಭಾಗ. ಆದರೆ, ಹಲವು ಬಾರಿ ಚುನಾವಣೆ ಮೂಲಕ ಗೆದ್ದ ಬಳಿಕ ಜನರ ಮೂಲ ಅವಶ್ಯಕತೆಗಳು ಈಡೇರದೇ ಇದ್ದಾಗ ಸಹಜವಾಗಿಯೇ ಜನರು ಅಸಮಾಧಾನಗೊಳ್ಳುತ್ತಾರೆ.
ಸುಳ್ಯ ತಾಲೂಕಿನ ಗುತ್ತಿಗಾರು - ಕಮಿಲ - ಬಳ್ಪ ರಸ್ತೆಯ ಸ್ಥಿತಿಯೂ ಹೀಗೇ ಆಗಿತ್ತು. ರಸ್ತೆ ಅಭಿವೃದ್ಧಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗದೇ ಇದ್ದಾಗ ಹೋರಾಟಗಳು ಆರಂಭವಾದವು. ಹೋರಾಟಕ್ಕೂ ಸ್ಪಂದನೆ ಬಾರದೇ ಇದ್ದಾಗ ಜನರೇ ಚುನಾವಣೆಗೆ ಇಳಿದರು. ಇಡೀ ವಾರ್ಡ್ ಜನರು ಹೋರಾಟಕ್ಕೆ ಬೆಂಬಲಿಸಿದರು.
ಈ ಕಾರಣದಿಂದ ಆಡಳಿತಕ್ಕೆ , ಜನಪ್ರತಿನಿಧಿಗಳಿಗೆ ಸಮಸ್ಯೆಯ ತೀವ್ರತೆ ಮನದಟ್ಟಾಯಿತು. ಅನುದಾನಗಳ ಸೂಕ್ತ ಬಳಕೆಯತ್ತ ಮುಂದಾಗಿ ಇದೀಗ ಗುತ್ತಿಗಾರು ಕಮಿಲ ಬಳ್ಪ ರಸ್ತೆ ಸಂಪೂರ್ಣ ಡಾಂಬರೀಕರಣವಾಗಿದೆ. ಈ ಕಾರಣದಿಂದ ಗ್ರಾಮ ಭಾರತ ತಂಡವು ಕಮಿಲ ಮೊಗ್ರದ ಜನತೆಗೆ ಅಭಿನಂದನೆ ಹಾಗೂ ಕೃತಜ್ಞತೆ ಸಲ್ಲಿಸಿದೆ.
ಈ ವಿಶಿಷ್ಟ ರೀತಿಯ ಅಭಿನಂದನಾ ಬ್ಯಾನರ್ ಈಗ ಗಮನ ಸೆಳೆದಿದೆ. ರಾಜಕೀಯ ರಹಿತ ಹೋರಾಟಗಳು ಹೇಗೆ ಯಶಸ್ವಿಯಾಗುತ್ತದೆ ಎನ್ನುವುದು ಇಲ್ಲಿ ಕಾಣಬಹುದು. ಪ್ರಜಾಪ್ರಭುತ್ವದಲ್ಲಿ ಜನರ ತೀರ್ಮಾನವೇ ಅಂತಿಮವಾಗಿದ್ದು, ಸೇವೆಗೆ ಅವಕಾಶ ನೀಡಿದ ಜನರ ಬೇಡಿಕೆ ಈಡೇರಿಕೆ ಕರ್ತವ್ಯ ಎಂದು ಜನಪ್ರತಿನಿಧಿಗಳೂ ಭಾವಿಸಬೇಕು ಹಾಗೂ ಜನರು ಒಂದಾದರೆ ಯಾವುದೇ ಅಭಿವೃದ್ಧಿ ಕೆಲಸ ಸಾಧ್ಯ ಎನ್ನುವುದನ್ನೂ ಇಲ್ಲಿ ಕಾಣಬಹುದಾಗಿದೆ.
ಇದನ್ನೂ ಓದಿ: ಜೆ.ಸಿ.ರಸ್ತೆ ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಹಾಕಲು ಮುಂದಾದ ಪಾಲಿಕೆ: ಫ್ಲೈ ಓವರ್ ನಿರ್ಮಾಣಕ್ಕೆ ಪ್ರಸ್ತಾವನೆ