ಮಂಗಳೂರು: ಮಂಗಳೂರಿನ ಡಯಟ್ ಶಿಕ್ಷಣ ಸಂಸ್ಥೆಗೆ ಬಂದ ಆಗಂತುಕನೊಬ್ಬ ಶಿಕ್ಷಕಿಯೊಬ್ಬರಿಗೆ ಗಿಫ್ಟ್ ಕೊಡುವ ನೆಪದಲ್ಲಿ ಬಂದು ತಲವಾರಿನಿಂದ ಹಲ್ಲೆ ಮಾಡಿದ್ದಾನೆ.
ಈ ಘಟನೆಯಲ್ಲಿ ರೀನಾ, ಗುಣವತಿ ಮತ್ತು ನಿರ್ಮಲ ಎಂಬ ಮೂವರು ಗಾಯಗೊಂಡಿದ್ದಾರೆ. ಇವರನ್ನು ಮಂಗಳೂರಿನ ಫಾದರ್ ಮುಲ್ಲರ್ ಮತ್ತು ವಿನಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಂಗಳೂರಿನ ಕಾರಾಗೃಹದ ಬಳಿ ಇರುವ ಡಯಟ್ ಶಿಕ್ಷಣ ಸಂಸ್ಥೆಗೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ಓರ್ವ ಮಹಿಳೆಯ ಹೆಸರು ಹೇಳಿ ಅವರು ಟೀಚರ್ ಆಗಿದ್ದು ಗಿಫ್ಟ್ ಕೊಡಬೇಕಿದೆ ಎಂದಿದ್ದಾನೆ. ಅಂತಹ ಮಹಿಳೆ ಇಲ್ಲಿ ಇಲ್ಲ ಎಂದು ಹೇಳಿದ್ದಾರೆ. ಆಗ ಆತ ತನ್ನ ಬಳಿಯಿದ್ದ ತಲವಾರಿನಿಂದ ಹಲ್ಲೆ ಮಾಡಿದ್ದಾನೆ.
ಈ ಶಿಕ್ಷಣ ಸಂಸ್ಥೆಯಲ್ಲಿದ್ದ ಮೂವರ ಮೇಲೆ ಆರೋಪಿ ಹಲ್ಲೆ ಮಾಡಿದ್ದಾನೆ. ಈ ವೇಳೆ ಮಹಿಳೆಯರ ಕಿರುಚಾಟ ಕೇಳಿ ಕಾರಾಗೃಹದ ಪೊಲೀಸ್ ಸಿಬ್ಬಂದಿ ಮತ್ತು ಸ್ಥಳೀಯರು ಆತನನ್ನು ಹಿಡಿದು ಬರ್ಕೆ ಪೊಲೀಸರಿಗೆ ಒಪ್ಪಿಸಿದರು.
ಬಂಧಿತ ಆರೋಪಿ ಕುಂದಾಪುರ ನ್ಯಾಯಾಲಯದಲ್ಲಿ ಜವಾನ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ನವೀನ್ (31) ಎಂದು ತಿಳಿದುಬಂದಿದೆ. ಪೊಲೀಸರ ತನಿಖೆಯ ವೇಳೆ ಆತ ಹಳೆಯ ವಿದ್ಯಾರ್ಥಿ ಎಂದು ಹೇಳುತ್ತಿದ್ದು, ಇತರ ಮಾಹಿತಿಗಳನ್ನು ನೀಡುತ್ತಿಲ್ಲ. ಆತ ಹಲ್ಲೆ ಮಾಡಲು ಕಾರಣ ಏನು ಎಂಬುದು ತಿಳಿದುಬಂದಿಲ್ಲ.
ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್, ದ.ಕ ಜಿ.ಪಂ ಸಿಇಓ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.