ಮಂಗಳೂರು: ಚೆಕ್ ಪೋಸ್ಟ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿ, ಬಂದೂಕಿಗೆ ಹಾನಿ ಮಾಡಿರುವ ಘಟನೆ ಮಂಗಳೂರಿನ ಕೂಳೂರು ಸೇತುವೆ ಬಳಿ ಮಧ್ಯರಾತ್ರಿ ನಡೆದಿದೆ.
ಸುರತ್ಕಲ್ ಕಡೆಯಿಂದ ಕಾರಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಚಲಿಸುತ್ತಿದ್ದ ವಾಹನಗಳಿಗೆ ಕಲ್ಲು ಎಸೆಯುತ್ತಾ ವಿಕೃತಿ ಮೆರೆಯುತ್ತಿದ್ದರು. ಆರೋಪಿಗಳು ಕೂಳೂರಿಗೆ ಬಂದಾಗ ಕೂಳೂರು ಚೆಕ್ ಪೋಸ್ಟ್ನಲ್ಲಿದ್ದ ಪೊಲೀಸರು ಅವರನ್ನು ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ, ಪೊಲೀಸರ ಕೈಯ್ಯಲ್ಲಿದ್ದ ಬಂದೂಕನ್ನು ನೆಲಕ್ಕೆ ಬಡಿದು ಹಾನಿ ಮಾಡಿದ್ದಾರೆ. ಪರಿಣಾಮ ಕಾವೂರು ಠಾಣೆಯ ಪೊಲೀಸ್ ಸಿಬ್ಬಂದಿ ಕಿರಣ್ ಮತ್ತು ರವೀಂದ್ರ ಅವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಪೊಲೀಸರ ಮೇಲೆ ಹಲ್ಲೆ ಮಾಡಿದ ಬಳಿಕ ಆರೋಪಿಗಳು ಪರಾರಿಯಾಗಲು ಮುಂದಾದಾಗ ವಾಹನನವೊಂದು ಡಿಕ್ಕಿ ಹೊಡೆದಿದ್ದು, ಅವರಿಗೂ ಗಾಯಗಳಾಗಿದೆ. ಗಾಯಾಳುಗಳನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿಗಳು ಕುಡಿದ ಮತ್ತಿನಲ್ಲಿ ಈ ಕೃತ್ಯ ಮಾಡಿದ್ದಾರೆ ಎಂದು ಶಂಕಿಸಲಾಗಿದ್ದು, ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದು ಎರಡನೇ ಬಾರಿ ಚೆಕ್ ಪೋಸ್ಟ್ನಲ್ಲಿ ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಲಾಗಿದೆ. ಇತ್ತೀಚೆಗೆ ನ್ಯೂ ಚಿತ್ರ ಸಿನಿಮಾ ಮಂದಿರ ಬಳಿಯ ಚೆಕ್ ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಗೆ ಚೂರಿಯಿಂದ ಇರಿದು ಹಲ್ಲೆ ಮಾಡಲಾಗಿತ್ತು.