ಮಂಗಳೂರು: ಬಸ್‌ನಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಆತನಿಂದ ₹ 59 ಲಕ್ಷ ಮೌಲ್ಯದ ಒಂದೂವರೆ ಕೆ.ಜಿ ಚಿನ್ನ ವಶಪಡಿಸಿಕೊಂಡಿದ್ದಾರೆ.
ಭಟ್ಕಳದ ಸಿಬ್ಗತುಲ್ಲಾ ಕೋಲಾ (31) ಬಂಧಿತ. ಖಚಿತ ಮಾಹಿತಿಯ ಮೇರೆಗೆ ದಾಳೆ ನಡೆಸಿದ ಡಿಆರ್‌ಐ ಅಧಿಕಾರಿಗಳು ಮಂಗಳೂರು ಬಸ್ ನಿಲ್ದಾಣದಲ್ಲಿ ಈತನನ್ನು ಬಂಧಿಸಿ, 13 ಚಿನ್ನದ ಗಟ್ಟಿಗಳನ್ನು ಜಪ್ತಿಮಾಡಿಕೊಂಡರು.
ಈತ ಕೆಎಸ್ಆರ್ಟಿಸಿ ಐರಾವತ ಬಸ್‌ನಲ್ಲಿ ಬೆಂಗಳೂರಿನಿಂದ ಉಡುಪಿಗೆ ಪ್ರಯಾಣಿಸುತ್ತಿದ್ದ. ಆರೋಪಿ ಯಾರಿಗೂ ಈ ಬಗ್ಗೆ ಸುಳಿವು ಸಿಗಬಾರದೆಂದು 13 ಚಿನ್ನದ ಗಟ್ಟಿಗಳನ್ನು ಸಿಗರೇಟ್ ಪ್ಯಾಕ್ ಒಳಗಿಟ್ಟು ಸಾಗಾಟ ಮಾಡುತ್ತಿದ್ದ. ಅಧಿಕಾರಿಗಳು ವಿಚಾರಣೆ ನಡೆಸಿದಾಗ ಸಾಗಿಸುತ್ತಿದ್ದ ಚಿನ್ನಕ್ಕೆ ಅಧಿಕೃತ ಆಧಾರಗಳು ಇರಲಿಲ್ಲ ಎಂದು ತಿಳಿದುಬಂದಿದೆ.
ಈತ ಚಿನ್ನವನ್ನು ದುಬೈನಿಂದ ಸಿಂಗಾಪುರಕ್ಕೆ ಅಲ್ಲಿಂದ ವಿಮಾನದ ಮೂಲಕ ಚೆನ್ನೈಗೆ ಸಾಗಿಸುತ್ತಾನೆ. ಬಳಿಕ ಇಲ್ಲಿಗೆ ತಂದು ಸಾಗಾಟ ಮಾಡಿರುವುದಾಗಿ ತಿಳಿಸಿದ್ದಾನೆ. ಕಸ್ಟಮ್ಸ್ ಅಧಿಕಾರಿಗಳಿಗೆ ಚಳ್ಳೆ ತಿನ್ನಿಸುವ ಸಲುವಾಗಿ ಈ ರೀತಿ ಸುತ್ತು ಹಾಕುವ ಯೋಜನೆ ರೂಪಿಸಿಕೊಂಡಿದ್ದ. ಭಟ್ಕಳ ಮೂಲದ ವ್ಯಕ್ತಿಯೋರ್ವ ಈತನಿಗೆ ಈ ಚಿನ್ನದ ಗಟ್ಟಿಗಳನ್ನು ನೀಡಿದ್ದು, ಅದನ್ನು ಮತ್ತೊಬ್ಬರಿಗೆ ತಲುಪಿಸಲು ಹೋಗುತ್ತಿದ್ದಾಗ ಅಧಿಕಾರಿಗಳ ಬಲೆಗೆ ಸಿಲುಕಿಕೊಂಡಿದ್ದಾನೆ.