ಮಂಗಳೂರು : ನಗರದ ವೆಲೆನ್ಶಿಯಾ ಜಂಕ್ಷನ್ ಬಳಿಯ ಐಡಿಯಲ್ ಚಿಕನ್ ಅಂಗಡಿಯ ಸಿಬ್ಬಂದಿ ಮೇಲೆ ಕಲ್ಲು ತೂರಾಡಿ ಹೆಲ್ಮೆಟ್ನಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ ಇಬ್ಬರು ರೌಡಿಶೀಟರ್ಗಳನ್ನು ಮಂಗಳೂರಿನ ಪಾಂಡೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಜಾಲ್ ಜಲ್ಲಿಗುಡ್ಡೆಯ ಪ್ರೀತಮ್ ಯಾನೆ ಅಲಿಯಾಸ್ ಪ್ರೀತಮ್ ಪೂಜಾರಿ ( 27 ) ಹಾಗೂ ಎಕ್ಕೂರಿನ ಧೀರಜ್ ಕುಮಾರ್ ಅಲಿಯಾಸ್ ಧೀರು (25) ಬಂಧಿತರು.
ನಿನ್ನೆ ಸಂಜೆ 6.30ಕ್ಕೆ ಮಂಗಳೂರು ನಗರದ ವೆಲೆನ್ಶಿಯಾ ಜಂಕ್ಷನ್ ಬಳಿಯ ಐಡಿಯಲ್ ಚಿಕನ್ ಅಂಗಡಿಯ ಮುಂಭಾಗ ಸಾರ್ವಜನಿಕರೊಬ್ಬರಿಗೆ ಪ್ರೀತಮ್ ಮತ್ತು ಧೀರಜ್ ಕುಮಾರ್ ಹೊಡೆಯುತ್ತಿದ್ದರು. ಇದನ್ನು ಐಡಿಯಲ್ ಚಿಕನ್ ಅಂಗಡಿ ಸಿಬ್ಬಂದಿ ಗಮನಿಸಿ ಪ್ರಶ್ನಿಸಿದ್ದಾರೆ. ಆಗ ಆರೋಪಿಗಳಿಬ್ಬರು ಚಿಕನ್ ಅಂಗಡಿಯ ಸಿಬ್ಬಂದಿ ಸುನಿಲ್ ಮಾರ್ಡಿ, ಅನಂತ ಹಾಗೂ ಜೀವನ್ ಎಂಬುವರ ಮೇಲೆ ಕಲ್ಲು ತೂರಾಡಿ, ಹೆಲ್ಮೆಟ್ನಿಂದ ಹೊಡೆದು ಮಾರಣಾಂತಿಕವಾಗಿ ಗಾಯಗೊಳಿಸಿದ್ದಾರೆ. ಚೂರಿಗಳಿಂದ ತಿವಿಯಲು ಹೋದಾಗ ಅಲ್ಲಿ ಸೇರಿದ ಸಾರ್ವಜನಿಕರು ಆರೋಪಿಗಳನ್ನು ತಡೆದಿದ್ದಾರೆ. ನಂತರ ಆರೋಪಿಗಳು ಸಾರ್ವಜನಿಕರಿಗೂ ಚೂರಿ ತೋರಿಸಿ, ತಿವಿಯಲು ಪ್ರಯತ್ನಿಸಿದ್ದಾರೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು ಸಾರ್ವಜನಿಕರ ಸಹಕಾರದಿಂದ ಆರೋಪಿಗಳಿಬ್ಬರನ್ನು ಬಂಧಿಸಿ, ಎರಡು ಚೂರಿ, ಕಲ್ಲು, ಹೆಲ್ಮೆಟ್ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ವೈದ್ಯಕೀಯ ತಪಾಸಣೆ ನಡೆಸಿದಾಗ, ಮದ್ಯ ಸೇವನೆ ಹಾಗೂ ಗಾಂಜಾ ಸೇವನೆ ಮಾಡಿರುವುದು ತಿಳಿದು ಬಂದಿದೆ.
ಆರೋಪಿ ಧೀರಜ್ ವಿರುದ್ಧ ಮಂಗಳೂರು ನಗರದ ದಕ್ಷಿಣ, ಪೂರ್ವ ಹಾಗೂ ಮಂಗಳೂರು ಗ್ರಾಮಾಂತರ ಠಾಣೆಗಳಲ್ಲಿ ಎರಡು ದರೋಡೆ, ಎರಡು ದರೋಡೆಗೆ ಸಂಚು, ಎರಡು ಕೊಲೆ ಯತ್ನ, ಹಲ್ಲೆ ಸೇರಿ ಒಟ್ಟು 8 ಪ್ರಕರಣ ದಾಖಲಾಗಿವೆ. ಪ್ರೀತಮ್ ವಿರುದ್ಧ ಮಂಗಳೂರು ನಗರದ ದಕ್ಷಿಣ, ಪೂರ್ವ, ಉತ್ತರ ಮಂಗಳೂರು ಗ್ರಾಮಾಂತರ ಠಾಣೆಗಳಲ್ಲಿ ಎರಡು ದರೋಡೆ, ಮೂರು ಕೊಲೆ ಯತ್ನ, ಮೂರು ಗಾಂಜಾ ಸೇವನೆ ಪ್ರಕರಣ ಸೇರಿದಂತೆ ಒಟ್ಟು 10 ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ: ತುಮಕೂರು: ಶ್ರೀರಾಮ ನವಮಿ ದಿನದಂದೇ ಆಂಜನೇಯ ದೇವಾಲಯದ ಹುಂಡಿ ಕಳ್ಳತನ