ಸುಬ್ರಹ್ಮಣ್ಯ: ಪ್ರಸಿದ್ಧ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅತ್ಯಮೂಲ್ಯ ಆಸ್ತಿಯನ್ನು ರಕ್ಷಣೆ ಮಾಡುವಂತೆ ಮತ್ತು ದೇಗುಲದ ಆಸ್ತಿ ಹಾಗೂ ಸ್ವತ್ತುಗಳನ್ನು ಯಾವುದೇ ಇತರ ಇಲಾಖೆಗಳಿಗೆ ಪರಭಾರೆ ಮಾಡಬಾರದೆಂದು ಆಗ್ರಹಿಸಿ ದೇವಸ್ಥಾನದ ಆಡಳಿತಾಧಿಕಾರಿಗಳಿಗೆ ಮನವಿ ನೀಡಲಾಗಿದೆ.
ಈ ಕುರಿತು ಅಧಿಕಾರಿಗಳಿಗೆ ಮನವಿ ಮಾಡಿರುವ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಕಿಶೋರ್ ಶೀರಾಡಿ ನೇತೃತ್ವದ ತಂಡ, ರಾಜ್ಯದ ಪ್ರಥಮ ಧಾರ್ಮಿಕ ಶ್ರದ್ಧಾ ಕೇಂದ್ರ ಮತ್ತು ಪ್ರಸಿದ್ಧ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸೇರಿದ ಯಾವುದೇ ಜಾಗವನ್ನು ಯಾವ ಇಲಾಖೆಗೂ ಪರಭಾರೆ ಮಾಡುವುದು ಸರಿಯಲ್ಲ ಮತ್ತು ಯಾವುದೇ ಇಲಾಖೆಗೆ ಪರಭಾರೆ ಮಾಡಿದರೂ ಅದು ದೇವಸ್ಥಾನದ ಆಸ್ತಿಯಾಗಿ ಇರುವುದಿಲ್ಲ. ಇದರಿಂದ ದೇವಸ್ಥಾನದ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ತೊಂದರೆಯಾಗುತ್ತದೆ.
ಈಗಾಗಲೇ ನೀಡಿರುವ ಶ್ರೀ ಸುಬ್ರಾಯ ದೇವರ ಕೆಲವು ಆಸ್ತಿಗಳು ದೇವಸ್ಥಾನದ ಕೈತಪ್ಪಿ ಹೋಗಿದ್ದು, ಯಾವುದೇ ಕಾರಣಕ್ಕೂ ದೇವಳದ ಅತ್ಯಮೂಲ್ಯವಾದ ಅಭಿವೃದ್ಧಿ ಕಾರ್ಯಗಳಿಗೆ ಅವಶ್ಯಕವಾದ ಆಸ್ತಿಯನ್ನು ಸರ್ಕಾರದ ಯಾವುದೇ ಇತರೆ ಇಲಾಖೆಯಾಗಲೀ, ಖಾಸಗಿ ಸಂಸ್ಥೆಗಳಿಗೆ, ವ್ಯಕ್ತಿಗಳಿಗಾಗಲೀ ಪರಭಾರೆ ಮಾಡಬಾರದು. ಮತ್ತು ದೇವಸ್ಥಾನದ ಆಸ್ತಿಯನ್ನು ಕಾಪಾಡುವ, ರಕ್ಷಿಸುವ ಕೆಲಸವನ್ನು ನಮ್ಮ ದೇವಸ್ಥಾನದ ಆಡಳಿತ ಮಾಡಬೇಕಾಗಿದೆ. ರಾಜ್ಯದ ಬಹುದೊಡ್ಡ ಧಾರ್ಮಿಕ ಸಂಸ್ಥೆಯ ಅವಶ್ಯಕತೆಗಿಂತ ಕಡಿಮೆ ಇರುವ ಶ್ರೀ ದೇವಳದ ಆಸ್ತಿಯನ್ನು ರಕ್ಷಿಸಿ ದೇವಳದ ಅಭಿವೃದ್ಧಿ ಮಾಡುವುದು ದೇವಳದ ಆಡಳಿತದ ಜವಾಬ್ದಾರಿಯಾಗಿರುತ್ತದೆ.
ಈಗಾಗಲೇ ಕಾಶಿಕಟ್ಟೆಯ ಬಳಿ ಆರೋಗ್ಯ ಇಲಾಖೆಯ ಹೊರರೋಗಿ ವಿಭಾಗದ ಚಿಕಿತ್ಸಾ ಘಟಕಕ್ಕೆ(OPD) ಶಂಕುಸ್ಥಾಪನೆ ಮಾಡಿರುವ ದೇವಳದ ಆಸ್ತಿ ಸುಬ್ರಹ್ಮಣ್ಯ ಪೇಟೆಯ ಹೃದಯಭಾಗದಲ್ಲಿರುವ ಅತ್ಯಮೂಲ್ಯ ಆಸ್ತಿಯನ್ನು ದೇವಳದ ಆಡಳಿತ ಕೂಡಲೇ ಹಿಂಪಡೆಯಬೇಕು. ಪೇಟೆಯಲ್ಲಿರುವ ದೇವಳದ ಯಾವುದಾದರೂ ವಸತಿಗೃಹದ ಕಟ್ಟಡದಲ್ಲಿ ಭಾಗಶಃ ಬೇಕಾದ ಸ್ಥಳಾವಕಾಶವನ್ನು ನೀಡಿ ಆರೊಗ್ಯ ಇಲಾಖೆಗೆ ಹೊರರೋಗಿ ಚಿಕಿತ್ಸಾ ಘಟಕ (OPD)ಕ್ಕೆ ಬೇಕಾದ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಈ ಹೊರರೋಗಿ ವಿಭಾಗದ ಚಿಕಿತ್ಸಾ ಘಟಕ ಮಾಡುವ ಮೂಲಕ ನಮ್ಮ ದೇವಸ್ಥಾನದ ಆಸ್ತಿಯ ರಕ್ಷಣೆ ಮಾಡಬೇಕು.
ಸದ್ಯ ಆರೋಗ್ಯ ಇಲಾಖೆಯಿಂದ ಮಂಜೂರಾಗಿರುವ 1,11 ಲಕ್ಷ ರೂಪಾಯಿಯ ಯೋಜನೆಯನ್ನು ಪರ್ವತಮುಖಿಯಲ್ಲಿರುವ 4.50 ಎಕರೆ ಸ್ಥಳಾವಕಾಶದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿಸಿ 30 ಬೆಡ್ಗಳ ಸಮುದಾಯ ಆರೋಗ್ಯ ಕೇಂದ್ರವನ್ನಾಗಿಸಲು ಬಳಸಬೇಕು. ಗ್ರಾಮಕ್ಕೆ, ಕ್ಷೇತ್ರಕ್ಕೆ ಸೂಕ್ತ ಆರೋಗ್ಯ ಇಲಾಖೆಯ ಆಸ್ಪತ್ರೆಯನ್ನು ಸುಸಜ್ಜಿತ ಸಮುದಾಯ ಕೆಂದ್ರವನ್ನಾಗಿಸುವಲ್ಲಿ ಆರೋಗ್ಯ ಇಲಾಖೆಯ ಈ ಅನುದಾನವನ್ನು ಬಳಸಿಕೊಂಡು ಶೀಘ್ರವೇ ಸಮುದಾಯ ಕೇಂದ್ರವನ್ನಾಗಿಸುವ ಮೂಲಕ ಕ್ಷೇತ್ರದಲ್ಲಿ ಸುವ್ಯವಸ್ಥಿತ ಆಸ್ಪತ್ರೆಯನ್ನು ಮಾಡಬೇಕು.
ಅನಗತ್ಯವಾಗಿ ಆರೋಗ್ಯ ಇಲಾಖೆಯ ಅನುದಾನವನ್ನಾಗಲೀ, ಕ್ಷೇತ್ರದ ಶ್ರೀ ಸುಬ್ರಹ್ಮಣ್ಯ ದೇವರ ಅತ್ಯಮೂಲ್ಯವಾದ ಕ್ಷೇತ್ರದ ಹೃದಯಭಾಗದ ಆಸ್ತಿಯನ್ನು ದುರುಪಯೋಗ ಮಾಡದೇ ಕ್ಷೇತ್ರದ ಅಭಿವೃದ್ಧಿಗಾಗಿ ಬಳಸಬೇಕು. ಹಾಗೂ ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ತೀರಾ ಅವಶ್ಯಕವಾದ ಎಲ್ಲಾ ಆಸ್ತಿಯನ್ನು ಯಾವುದೇ ರೀತಿಯಲ್ಲಿ ಹಾಳು ಮಾಡದೆ ರಕ್ಷಿಸಬೇಕು ಎಂಬುದಾಗಿ ಮನವಿ ಮಾಡಿದ್ದಾರೆ.