ಬಂಟ್ವಾಳ (ದ.ಕ.): ತಾಲೂಕಿನಲ್ಲಿ ಲಾಕ್ ಡೌನ್ ಯಶಸ್ವಿಯಾಗಿದ್ದು, ಇದಕ್ಕೆ ತಾಲೂಕು ಮಟ್ಟದ ಎಲ್ಲಾ ಸ್ತರದ ಅಧಿಕಾರಿಗಳು ಜೀವದ ಹಂಗು ತೊರೆದು ಬದ್ಧತೆಯಿಂದ ಕೆಲಸ ಮಾಡಿದ್ದೇ ಕಾರಣ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ ಮತ್ತು ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ತಿಳಿಸಿದ್ದಾರೆ.
ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ ಮಾಹಿತಿ ನೀಡಿ, ತಾಲೂಕಿನ ಯಾವುದೇ ಸಮಸ್ಯೆಗಳು ಬಂದರೂ ನೇರವಾಗಿ ಸ್ಪಂದಿಸಲು ನಿರ್ಧರಿಸಲಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ದರಪಟ್ಟಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ದರಪಟ್ಟಿಯನ್ನು ಹಾಕಲು ಸೂಚಿಸಲಾಗಿದೆ. ಯಾರಾದರೂ ಅದನ್ನು ಉಲ್ಲಂಘಿಸಿದರೆ, ಅವರ ಲೈಸನ್ಸ್ ರದ್ದುಗೊಳಿಸಲು ಸೂಚಿಸಲಾಗಿದೆ.
ಇನ್ನು ಅಂಗಡಿಗಳಲ್ಲಿ ದಾಸ್ತಾನು ಕೊರತೆಯಾದರೆ ಮಾರ್ಕೆಟ್ನಿಂದ ತರಿಸುವ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಸ್ಥಳೀಯ ಮಟ್ಟದಲ್ಲಿ ಎನ್.ಒ.ಸಿ. ಬೇಕು ಎಂದರೆ, ಪಂಚಾಯತ್ನಲ್ಲಿ ಆಗುವ ಕೆಲಸಗಳನ್ನು ಮಾಡಲಾಗುತ್ತಿದ್ದು, ಸಾರ್ವಜನಿಕರು ಪರದಾಡದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಕೂಲಿ ಕಾರ್ಮಿಕರಿಗೆ ನೆರವು: ಕೂಲಿ ಕಾರ್ಮಿಕರಿಗೆ ಊಟ, ಆಹಾರ ಧಾನ್ಯ ವ್ಯವಸ್ಥೆ ಟಾಸ್ಕ್ ಫೋರ್ಸ್ ವತಿಯಿಂದ ಮಾಡಲಾಗಿದೆ. ವಲಸೆ ಬಂದ ಕೂಲಿ ಕಾರ್ಮಿಕರಿಗೆ ಬಡಗಬೆಳ್ಳೂರು, ಬೆಂಜನಪದವು, ಕಳ್ಳಿಗೆ, ಕೋಳ್ನಾಡು, ಸಾಲೆತ್ತೂರುನಲ್ಲಿರುವ ಕೂಲಿ ಕಾರ್ಮಿಕರು ಮತ್ತು ನಿರ್ಗತಿಕರಿಗೆ ಹಾಲಿನ ವ್ಯವಸ್ಥೆಯನ್ನು ಸರ್ಕಾರದಿಂದ ಮಾಡಲಾಗಿದೆ. ಅವರ ಬಳಿ ರೇಷನ್ ಕಾರ್ಡ್ ಇದ್ದರೆ, ಅದು ಅವರ ಬಳಿ ಇಲ್ಲದಿದ್ದರೂ ಹತ್ತಿರದ ನ್ಯಾಯಬೆಲೆ ಅಂಗಡಿಯಿಂದ ಆಹಾರ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಇನ್ನು ಗಡಿ ಪ್ರದೇಶಗಳಲ್ಲಿ ಎಲ್ಲಾ ಕಡೆಗಳಲ್ಲೂ ಬಂದ್ ಮಾಡಲಾಗಿದ್ದು, ಪಂಚಾಯತ್ ಸಿಬ್ಬಂದಿಗೆ ಸಮಸ್ಯೆಯಾದಾಗ ಪೊಲೀಸ್ ನೆರವನ್ನೂ ಪಡೆಯಲಾಗಿದೆ. ಸಮಸ್ಯೆಗಳು ಇದ್ದರೆ, ಟಾಸ್ಕ್ ಫೋರ್ಸ್ ಜೊತೆ ಚರ್ಚೆ ಮಾಡಿ ಯಾರಿಗೂ ತೊಂದರೆ ಆಗದಂತೆ ನಡೆಸಲಾಗುತ್ತಿದೆ ಎಂದರು.