ಮಂಗಳೂರು/ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ 11 ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬಂಟ್ವಾಳ ತಾಲೂಕಿನಲ್ಲಿ ಹರಿಯುತ್ತಿರುವ ನೇತ್ರಾವತಿ ನದಿ ಅಪಾಯದ ಮಟ್ಟ ತಲುಪಿದೆ. ನೆರೆ ಭೀತಿ ಎದುರಾಗಿದ್ದು ಇಂದು ಬೆಳಗ್ಗೆ 8.4 ಮೀಟರ್ ಎತ್ತರದಲ್ಲಿ ನದಿ ಹರಿಯುತ್ತಿತ್ತು. ನದಿಯ ಅಪಾಯದ ಮಟ್ಟ 8.5 ಮೀಟರ್ ಆಗಿದೆ.
ಇನ್ನೊಂದೆಡೆ, ವರುಣನ ಆರ್ಭಟಕ್ಕೆ ಅದ್ಯಪಾಡಿ ಭಾಗದ ಸುಮಾರು 35 ಮನೆಗಳು, ತೋಟ, ಎಕರೆಗಟ್ಟಲೆ ಕೃಷಿ ಭೂಮಿ ಜಲಾವೃತವಾಗಿವೆ. ಕಳೆದ 10 ದಿನಗಳಿಂದ ಮಂಗಳೂರು ತಾಲೂಕಿನ ಅದ್ಯಪಾಡಿ ಪ್ರದೇಶದ ಜನತೆ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮರವೂರಿನಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣದ ಬಳಿಕ ಇಲ್ಲಿನ ಜನತೆ ಪ್ರತಿ ವರ್ಷ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಮರವೂರಿನಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣದ ಬಳಿಕ ಅದ್ಯಪಾಡಿ ಹಾಗೂ ಮೂಡುಕೆರೆ ಗ್ರಾಮದಲ್ಲಿ ಸಮಸ್ಯೆ ತಲೆದೋರಿದ್ದು, 10-15 ದಿನಗಳಾದರೂ ನೆರೆ ಇಳಿಮುಖವಾಗುವುದಿಲ್ಲ. ತುರ್ತು ಸೇವೆ, ಅಗತ್ಯ ವಸ್ತುಗಳ ಪೂರೈಕೆಗೆ ದೋಣಿಯನ್ನೇ ಅವಲಂಬಿಸಬೇಕು. ಇಲ್ಲಿನ ಜನತೆ ಕೃಷಿ ನಂಬಿ ಬದುಕುತ್ತಿದ್ದು, ಕೃಷಿಭೂಮಿಯಲ್ಲಿ ನೀರು ನಿಂತು ಸಂಪೂರ್ಣ ಬೆಳೆ ಹಾನಿಯಾಗುತ್ತಿದೆ.
ಇದನ್ನೂ ಓದಿ: ಕಾಣಿಯೂರು ಸಮೀಪ ಉಕ್ಕಿಹರಿಯುವ ಹೊಳೆಗೆ ಬಿದ್ದ ಕಾರು; ಮುಂದುವರೆದ ಶೋಧ