ಮಂಗಳೂರು: ನಗರದಲ್ಲಿ ಕುಟುಂಬವೊಂದು 9 ದಶಕಗಳಿಂದ ನಾಲ್ಕು ತಲೆಮಾರುಗಳ ಮೂಲಕ ಗಣೇಶನ ಮೂರ್ತಿ ತಯಾರಿಕಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ದೂರದ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲೂ ಈ ಕುಟುಂಬದ ಗಣೇಶನ ಮೂರ್ತಿಗೆ ಭಾರಿ ಬೇಡಿಕೆಯಿದೆ.
ನಗರದ ಮಣ್ಣಗುಡ್ಡೆಯಲ್ಲಿರುವ ಈ ಕುಟುಂಬದ ಹಿರಿಯರಾದ ಮೋಹನ್ ರಾವ್ ಅವರು 9 ದಶಕಗಳ ಹಿಂದೆ ಗಣೇಶ ಮೂರ್ತಿ ತಯಾರಿಕಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಆ ಬಳಿಕ ಅವರ ನಾಲ್ವರು ಮಕ್ಕಳು ಈ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಇದೀಗ ಅವರ ಮಕ್ಕಳು, ಮೊಮ್ಮಕ್ಕಳು ಇದರೊಂದಿಗೆ ಕೈಜೋಡಿಸುತ್ತಿದ್ದು, ಒಟ್ಟು ನಾಲ್ಕು ತಲೆಮಾರು ಈ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ.
ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್‌ನಲ್ಲಿರುವ ಪ್ರಸನ್ನ ಗಣಪತಿ ದೇವಳದಲ್ಲಿ ಸಾರ್ವಜನಿಕ ಗಣೇಶೋತ್ಸವದಲ್ಲಿ ಆರಾಧನೆಗೊಳ್ಳುವ ಗಣೇಶನ ಮೂರ್ತಿ ಜೂನ್ 30ರಂದು ಇಲ್ಲಿಂದ ರವಾನೆಯಾಗಿದೆ. ಅಲ್ಲದೆ ಕೇರಳದ ಕಾಸರಗೋಡು ಕುಂಬಳೆಗೂ ಇಲ್ಲಿಂದಲೇ ಗಣೇಶನ ಮೂರ್ತಿ ಹೋಗುತ್ತದೆ.
ಕೊರೊನಾ ಸಂಕಷ್ಟದ ನಡುವೆಯೂ ಈ ಬಾರಿ ಸಾರ್ವಜನಿಕ ಗಣೇಶೋತ್ಸವದ ಮೂರ್ತಿ, ಮನೆಯಲ್ಲಿ ಕೂರಿಸುವ ಸಣ್ಣ ಗಣೇಶ ಮೂರ್ತಿ ಸೇರಿ ಸುಮಾರು 230 ಮೂರ್ತಿಗಳನ್ನು ಕುಟುಂಬ ತಯಾರಿಸಿದೆ. ಗಣೇಶನ ವಿಗ್ರಹ ತಯಾರಿಕೆಗೆ ಅವಶ್ಯಕತೆ ಇರುವ ಆವೆಮಣ್ಣು ನಗರದಲ್ಲಿ ದೊರಕದಿದ್ದರೂ, ನಗರದ ಹೊರವಲಯದ ಗುರುಪುರ ಭಾಗದಿಂದ ಸುಮಾರು ಎರಡು ಲಾರಿ ಮಣ್ಣು ಖರೀದಿಸಿ ಗಣೇಶನ ವಿಗ್ರಹ ತಯಾರಿಕೆಯಲ್ಲಿ ಈ ಕುಟುಂಬ ತೊಡಗಿಸಿಕೊಂಡಿದೆ. ಅಲ್ಲದೆ 9 ದಶಕಗಳಿಂದ ಈ ಕುಟುಂಬ ಪರಿಸರ ಸ್ನೇಹಿ ಗಣೇಶನ ವಿಗ್ರಹ ಮಾತ್ರ ತಯಾರಿಸುತ್ತಿದ್ದು, ಯಾವುದೇ ರೀತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್, ಪರಿಸರ ಮಾರಕ ಬಣ್ಣವನ್ನು ಬಳಸುತ್ತಿಲ್ಲ ಅನ್ನೋದು ಮತ್ತೊಂದು ವಿಶೇಷವಾಗಿದೆ.
ಇದನ್ನೂ ಓದಿ: ಮಂಗಳೂರು: ಮರದ ಬಳ್ಳಿಯಲ್ಲಿ ಮೂಡಿದ ಗಣಪ!