ಮಂಗಳೂರು: ನಾನು ತಪ್ಪಿ ನಡೆದರೆ ವಾಟ್ಸಪ್, ಟ್ವಿಟರ್, ಫೇಸ್ಬುಕ್ನಲ್ಲಿ ಬಯ್ಯಬೇಡಿ. ನನ್ನ ಮನೆಗೆ ಅಥವಾ ನನ್ನ ಕಚೇರಿಗೆ ಬಂದು ಬೈಯಿರಿ. ಏಕೆಂದರೆ, ನಾನು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿಲ್ಲ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾನೆಷ್ಟೇ ಎತ್ತರಕ್ಕೆ ಹೋದರೂ ದ.ಕ ಜಿಲ್ಲೆಯ ಜನತೆಗೆ ರಾಜ್ಯಾಧ್ಯಕ್ಷ ಅಲ್ಲ. ಸಾಮಾನ್ಯ ಕಾರ್ಯಕರ್ತ. ಜ್ಞಾನವಂತ, ವಿದ್ವಾಂಸ, ಶಿಕ್ಷಣ ತಜ್ಞ ಅಲ್ಲ. ಸಂಘದ ನಿಷ್ಠಾವಂತ ಕಾರ್ಯಕರ್ತನಷ್ಟೇ. ಸಾರ್ವಜನಿಕ ಜೀವನದಲ್ಲಿದ್ದೇನೆ ಟೀಕೆಗಳನ್ನು ಸ್ವೀಕರಿಸಬೇಕು ಎಂದರು.
ಹೋರಾಡಿದರೆ ಬಿಜೆಪಿಯಲ್ಲಿ ಚುನಾವಣೆ ಸೀಟು ಸಿಗುತ್ತದೆ ಎಂಬುದು ಕೆಲವರಲ್ಲಿ ತಪ್ಪು ಕಲ್ಪನೆಯಿದೆ. ಇಲ್ಲಿ ಕೆಲಸಕ್ಕೆ ಮಾತ್ರ ಸೀಟು ಸಿಗುವುದು ಎಂಬುದನ್ನು ಅರಿಯಬೇಕು. ಆದ್ದರಿಂದ, ಈ ಜಿಲ್ಲೆಯ ಅಭಿವೃದ್ಧಿಗೆ ಶ್ರಮಪಟ್ಟು ದುಡಿಯುತ್ತೇನೆ. ಆದರೆ ಈಗ ರಾಜ್ಯಾಧ್ಯಕ್ಷನಾಗಿದ್ದೇನೆ. ಗ್ರಾಮ ಗ್ರಾಮಕ್ಕೆ ಪ್ರವಾಸ ಕೈಗೊಳ್ಳಲು ಸಾಧ್ಯವಿಲ್ಲ. ಆದರೆ ಬೇಸರ ಮಾಡಿಕೊಳ್ಳಬೇಡಿ. ಸಮರ್ಥರಾದ ಏಳು ಶಾಸಕರಿದ್ದಾರೆ. ಅವರೇ ಮುಂದಿನ ನಿಮ್ಮ ಸಂಸದರು ಎಂದು ನಳಿನ್ ಕುಮಾರ್ ಹೇಳಿದರು.
ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ಅಂಗಾರ, ಸಂಜೀವ ಮಠಂದೂರು, ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್, ಉಮಾನಾಥ ಕೋಟ್ಯಾನ್, ಹಾಲಾಡಿ ಶ್ರೀನಿವಾಸಶೆಟ್ಟಿ, ದ.ಕ ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಾಜಿ ಸಚಿವ ಯೋಗೀಶ್ ಭಟ್ ಇದ್ದರು.