ಕಲಬುರಗಿ: ಸಂಪುಟಕ್ಕೆ ಸೇರಿಸೋದು, ಕೈ ಬಿಡೋದು ಹೈಕಮಾಂಡ್ಗೆ ಬಿಟ್ಟ ವಿಚಾರ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧವಾಗಿದ್ದೇವೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಂತರ ಮಾತನಾಡಿದ ಅವರು, ಕೆಲ ಸಚಿವರ ರಾಜೀನಾಮೆ ಪಡೆಯುತ್ತಾರೆ ಎಂಬ ವಿಚಾರ ನನಗೆ ಗೊತ್ತಿಲ್ಲ. ಯಾರು ಏನೇ ಮಾಡಿದರೂ ಅದರ ಬಗ್ಗೆ ನಾನು ತಲೆ ಕೆಡೆಸಿಕೊಳ್ಳೋದಿಲ್ಲ. ಪಕ್ಷದ ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.
ಸಿಎಂ ಬದಲಾವಣೆಗೆ ಕೆಲ ಶಾಸಕರ ಬೇಡಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ದೇಶಪಾಂಡೆ, ಇದು ಆಗದ ಬೇಡಿಕೆ. ಅಲ್ಲದೆ ಸಿಎಂ ಬದಲಾವಣೆ ಮಾಡಿ ಎಂದು ಯಾರೂ ಡಿಮ್ಯಾಂಡ್ ಮಾಡಿಲ್ಲ ಎಂದು ಹೇಳಿದರು.
ರಾಜಕಾರಣ ಚುನಾವಣೆಗೆ ಸೀಮಿತವಾಗಿರಬೇಕು. ರಾಜ್ಯದ ಅಭಿವೃದ್ಧಿ ಬಗ್ಗೆ ನಿಜವಾದ ಕಾಳಜಿ ಇದ್ದಲ್ಲಿ ಎಲ್ಲರೂ ಕೂಡಿ ಕೆಲಸ ಮಾಡಬೇಕು. ಬರೀ ನಾನೊಬ್ಬನೇ ಕೆಲಸ ಮಾಡಿದರೆ ಆಗೋದಿಲ್ಲ. ಬರಗಾಲ ನಿರ್ವಹಣೆ ವಿಷಯವನ್ನೇ ತೆಗೆದುಕೊಂಡರೆ ಇದಕ್ಕೆ ವಿರೋಧ ಪಕ್ಷಗಳೂ ಸಹಕಾರ ನೀಡಬೇಕು. ಸಲಹೆ-ಸೂಚನೆ ನೀಡೋ ಜೊತೆಗೆ, ತಪ್ಪಿದ್ದಲ್ಲಿ ಎತ್ತಿ ತೋರಿಸಿದರೆ ಅದನ್ನು ತಿದ್ದಿಕೊಳ್ಳಲು ನಾನು ಸಿದ್ಧ ಎಂದರು.