ಕಲಬುರಗಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಇನ್ನೊಂದು ಕಡೆ ರಾಜ್ಯದ ಮಠಾಧೀಶರು ದೊಡ್ಡ ಸಂಖ್ಯೆಯಲ್ಲಿ ಬಿಎಸ್ವೈ ಬೆನ್ನಿಗೆ ನಿಂತಿದ್ದಾರೆ. ಸಿಎಂ ಯಡಿಯೂರಪ್ಪ ಅವರನ್ನು ಕೆಳಗಿಸುವಂತೆ ಸ್ವ-ಪಕ್ಷದಲ್ಲೇ ಅಪಸ್ವರ ಕೇಳಿಬರುತ್ತಿವೆ. ಬದಲಾವಣೆ ವಿಚಾರ ಹೈಕಮಾಂಡ್ ಅಂಗಳಕ್ಕೂ ತಲುಪಿದೆ.
ಈ ನಡುವೆ ರಾಜ್ಯದ ಕೆಲ ಮಠಾಧೀಶರು ಯಡಿಯೂರಪ್ಪರನ್ನು ಟಚ್ ಮಾಡಿದರೆ ಪಾರ್ಲಿಮೆಂಟ್ ಎದುರಿಗೆ ಸತ್ಯಾಗ್ರಹ ನಡೆಸುತ್ತೇವೆ ಎಂದು ಎಚ್ಚರಿಕೆ ರವಾನಿಸುತ್ತಿದ್ದಾರೆ. ಸುಲಫಲ ಮಠದ ಸಾರಂಗಧರ ಸ್ವಾಮೀಜಿ ಕೂಡ ಬಿಎಸ್ವೈ ಪರ ಬ್ಯಾಟ್ ಬೀಸಿದ್ದಾರೆ.
ಓದಿ: ಇಂದು ಸಚಿವರು, ನಾಳೆ ಶಾಸಕರು, ನಾಡಿದ್ದು ಕೋರ್ ಕಮಿಟಿ ಸಭೆ; ಟ್ರಬಲ್ ಶೂಟ್ಗೆ ಅರುಣ್ ಸಿಂಗ್ ಆಗಮನ
ಕಲಬುರಗಿಯಲ್ಲಿ ಸಿಎಂ ಪರವಾಗಿ ಬ್ಯಾಟ್ ಬೀಸಿದ ಸುಲಫಲ ಮಠದ ಸಾರಂಗಧರ ಮಹಾಸ್ವಾಮಿ, ಯಡಿಯೂರಪ್ಪ ಅವರನ್ನು ಟಚ್ ಮಾಡಿದರೆ ಕರ್ನಾಟಕಕ್ಕೆ ಬೆಂಕಿ ಹೊತ್ತಿಕೊಳ್ಳುತ್ತದೆ ಎಂದು ಗುಡುಗಿದ್ದಾರೆ. ಯಡಿಯೂರಪ್ಪ ಕೇವಲ ಲಿಂಗಾಯತ ಸಮುದಾಯದ ನಾಯಕರಲ್ಲ, ಅವರು ಸರ್ವ ಜನಾಂಗದ ನಾಯಕರು. 40 ವರ್ಷಗಳ ಕಾಲ ಸತತ ಹೋರಾಟ ಮಾಡಿ ಸಿಎಂ ಆಗಿದ್ದಾರೆ.
ಬಿ.ಎಸ್. ಯಡಿಯೂರಪ್ಪನವರು ಸಿಎಂ ಖುರ್ಚಿಗೆ ಅಂಟಿಕೊಂಡು ಕೂತಿಲ್ಲ. ಬದಲಾಗಿ ಸಿಎಂ ಹುದ್ದೆಯೇ ಅವರನ್ನು ಹುಡುಕಿಕೊಂಡು ಬಂದಿದೆ. ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿದರೆ ಬಿಜೆಪಿ ಸರ್ವನಾಶವಾಗುವುದು ಪಕ್ಕಾ ಎಂದು ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.