ಕಲಬುರಗಿ: ಚೌಕಿದಾರ್ ಚೋರ್ ಹೈ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸುವುದರಲ್ಲಿ ಯಾವುದೇ ತಪ್ಪಿಲ್ಲ ಅಂತಾ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಸಮರ್ಥಿಸಿಕೊಂಡಿದ್ದಾರೆ. ಸುಪ್ರೀಂಕೋರ್ಟ್ ಕ್ಷಮೆ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದೀಯ ನಾಯಕ ಖರ್ಗೆ, ಚೌಕಿದಾರ್ ಚೋರ್ ಹೈ ಎಂದು ರಾಹುಲ್ ಹೇಳ್ತಿರೋದು ಸರಿಯಾಗಿದೆ ಅಂತಾ ಹೇಳಿದ್ದಾರೆ.
ರಾಹುಲ್ ಗಾಂಧಿಯವರಿಗೆ ತಮ್ಮ ಜಡ್ಜ್ಮೆಂಟ್ ಬಗ್ಗೆ ನೀವು ತಪ್ಪಾಗಿ ಕಮೆಂಟ್ ಮಾಡಿದ್ದೀರಿ ಎಂದು ಸುಪ್ರೀಂಕೋರ್ಟ್ ಸ್ಪಷ್ಟನೆ ಕೇಳಿತ್ತು. ಈ ಕುರಿತು ರಾಹುಲ್ ಗಾಂಧಿ ಸುಪ್ರೀಂಕೋರ್ಟ್‌ಗೆ ವಿವರಣೆ ನೀಡಿದ್ದಾರೆ. ಆದರೆ, ಭಾಷಣದಲ್ಲಿ ಮಾತ್ರ ರಾಹುಲ್ ಗಾಂಧಿ ಚೌಕಿದಾರ್ ಚೋರ್ ಹೈ ಎಂದು ಹೇಳುವುದನ್ನು ನಿಲ್ಲಿಸಿಲ್ಲ ಎಂದರು.
ಚುನಾವಣೆ ನಂತರ ರಾಜ್ಯ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ಯಡಿಯೂರಪ್ಪ ಕನಸು ಕಾಣುತ್ತಲೇ ಇರಲಿ. ಲೋಕಸಭೆ ಫಲಿತಾಂಶ ಏನು ಬರುತ್ತದೆ ಬರಲಿ. ಆದರೆ, ಪದೇಪದೆ ಸರ್ಕಾರ ಪತನ ಆಗುತ್ತದೆ ಅನ್ನೋದು ಸರಿಯಲ್ಲ. ಜಾತ್ಯಾತೀತ ತತ್ವದ ಮೇಲೆ ಸಮಿಶ್ರ ಸರ್ಕಾರ ರಚನೆಗೊಂಡಿದ್ದು, ಅದನ್ನು ಅಭದ್ರಗೊಳಿಸೋದು ಅಸಾಧ್ಯ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.