ಕಲಬುರಗಿ: 545 ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆಯ ಎರಡನೇ ಹಂತ ಆರಂಭಿಸಿರುವ ಸಿಐಡಿ ಅಧಿಕಾರಿಗಳು ಮತ್ತೊಬ್ಬ ಡೀಲರ್ನನ್ನು ಖೆಡ್ಡಾಗೆ ಕೆಡವಿದ್ದಾರೆ. ಪ್ರಕರಣದ ಕಿಂಗ್‌ಪಿನ್ ಆರ್.ಡಿ. ಪಾಟೀಲ್‌ನ ಆಪ್ತ ಹಾಗೂ ಪಾಟೀಲ್ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ಪ್ರಕಾಶ್ ಬಂಧಿತ.
ಆರ್.ಡಿ.ಪಾಟೀಲ್ ಸೂಚನೆ ಮೇರೆಗೆ ಪರಿಕ್ಷಾರ್ಥ ಅಭ್ಯರ್ಥಿಗಳಿಂದ ಹಣ ಸಂಗ್ರಹಿಸಿ ಆರ್‌ಡಿ ಪಾಟೀಲ್ಗೆ ನೀಡುವುದು. ಅಭ್ಯರ್ಥಿಗಳಿಗೆ ಪರೀಕ್ಷೆ ಅಕ್ರಮಕ್ಕೆ ಬೇಕಾಗುವ ಸಲಕರಣೆ ಒದಗಿಸುವ ಕೆಲಸವನ್ನು ಪ್ರಕಾಶ ಮಾಡುತ್ತಿದ್ದನೆಂದು ತಿಳಿದುಬಂದಿದೆ. ನಗರದ MSI ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ನಡೆದ ಪಿಎಸ್ಐ ಪರೀಕ್ಷೆ ಅಕ್ರಮದಲ್ಲಿ ಅಭ್ಯರ್ಥಿ ಪ್ರಭು ಎಂಬಾತನಿಗೆ ಪ್ರಕಾಶ್ ಬ್ಲೂಟೂತ್ ಡಿವೈಸ್ ನೀಡಿ ಬಂದಿದ್ದ ಎನ್ನಲಾಗ್ತಿದೆ.
ಆರ್‌ಡಿಪಿ ವಿಚಾರಣೆ ವೇಳೆ ನೀಡಿದ ಮಾಹಿತಿ ಆಧರಿಸಿ ಪ್ರಕಾಶನನ್ನು ಬಂಧಿಸಲಾಗಿದೆ. ಇಷ್ಟು ದಿನ ಬೆಂಗಳೂರಿಗೆ ಶಿಫ್ಟ್ ಆಗಿದ್ದ ಸಿಐಡಿ ತಂಡ ಮತ್ತೆ ಕಲಬುರಗಿಯಲ್ಲಿ ಬೀಡುಬಿಟ್ಟಿದೆ. ಆರ್.ಡಿ. ಪಾಟೀಲ್ ಆಪ್ತನನ್ನು ಗಾಳಕ್ಕೆ ಕೆಡವಲಾಗಿದೆ. ಇದರೊಂದಿಗೆ ಕಲಬುರಗಿಯಲ್ಲಿ ಬಂಧಿತರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. ಪ್ರಕಾಶನನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಅಧಿಕಾರಿಗಳು, 6 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: PSI ಹಗರಣ ನ್ಯಾಯಾಂಗ ತನಿಖೆಗೆ ಒಪ್ಪಿಸಿ, ಕಳಂಕಿತ ಮಂತ್ರಿಗಳನ್ನು ವಜಾ ಮಾಡಿ: ಸಿಎಂಗೆ ಸಿದ್ದರಾಮಯ್ಯ ಪತ್ರ