ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮದಲ್ಲಿ ಬಂಧನಕ್ಕೊಳಗಾದ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ವಿಚಾರಣೆ ಇಂದೂ ಮುಂದುವರೆದಿದೆ. ವಿಚಾರಣೆ ನಡೆಸುತ್ತಿರುವ ಸಿಐಡಿ ಕೈಗೆ ತನ್ನ ಮೊಬೈಲ್ ಕೊಡದೆ ಮಹಾರಾಷ್ಟ್ರದಲ್ಲಿಯೇ ಒಡೆದು ಹಾಕಿದ್ದಾರೆ ಎಂದು ಹೇಳಲಾಗಿದೆ.
ಕೆಲವು ದಿನಗಳ ಹಿಂದೆ ಸಿಐಡಿ ಅಧಿಕಾರಿಗಳು ಪುಣೆಯಲ್ಲಿ ದಿವ್ಯಾಳನ್ನು ಬಂಧಿಸಿದ್ದರು. ಈ ವೇಳೆ, ಮೊಬೈಲ್ ಬಗ್ಗೆ ವಿಚಾರಿಸಿದಾಗ ಆಕೆ ಬಾಯಿ ಬಿಟ್ಟಿರಲಿಲ್ಲ. ಇಂದು ಕಲಬುರಗಿಯಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಪುಣೆಯ ಮನೆಯಲ್ಲೇ ತಮ್ಮ ಮೊಬೈಲ್ ಒಡೆದು ಹಾಕಿರುವುದಾಗಿ ಬಾಯಿ ಬಿಟ್ಟಿದ್ದಾರೆ. ಮೊಬೈಲ್ ನಲ್ಲಿದ್ದ ಸಾಕ್ಷ್ಯಾಧಾರಗಳನ್ನು ನಾಶ ಮಾಡುವ ಉದ್ದೇಶದಿಂದ ಹೀಗೆ ಮಾಡಿರುವುದಾಗಿ ತಿಳಿದು ಬಂದಿದೆ.
ಸಾಕ್ಷಿಗಾಗಿ ಪರಿಶೀಲನೆ: ಉಳಿದ ಆರೋಪಿಗಳ ಬಳಿಯಿದ್ದ ಮೊಬೈಲ್ ಜಪ್ತಿ ಮಾಡಿರುವ ಸಿಐಡಿ, ಮೊಬೈಲ್ ನಲ್ಲಿ ಏನಾದರು ಸಾಕ್ಷಿ ಇದೆಯಾ ಅನ್ನೋದರ ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ, ಮೊಬೈಲ್ ನಲ್ಲಿದ್ದ ಬಹುತೇಕ ಸಾಕ್ಷ್ಯಾಧಾರಗಳನ್ನು ಆರೋಪಿಗಳು ನಾಶ ಮಾಡಿರುವುದಾಗಿ ತಿಳಿದು ಬಂದಿದೆ.
ದಿವ್ಯಾ ಸೇರಿದಂತೆ ಇತರ ಆರೋಪಿಗಳು ಪ್ರಕರಣದ ಸಾಕ್ಷಿ ನಾಶ ಮಾಡಲು ಯತ್ನಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ದಿವ್ಯಾ ಹೇಳಿಕೆ ಆಧರಿಸಿ ಮೊಬೈಲ್ ಹುಡುಕುವ ಕೆಲಸಕ್ಕೆ ಸಿಐಡಿ ಮುಂದಾಗಬಹುದು. ಅಗತ್ಯ ಬಿದ್ದರೆ ದಿವ್ಯಾಳನ್ನು ಮರಳಿ ಪುಣೆಗೆ ಕರೆದೊಯ್ಯುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಅಲ್ಲದೇ ಇಂದು ಜ್ಞಾನಜ್ಯೋತಿ ಶಾಲೆಗೆ ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ಮಾಡುವ ಸಾಧ್ಯತೆಯೂ ಇದೆ ಎಂದು ತಿಳಿದು ಬಂದಿದೆ.
ಓದಿ : ಪಿಎಸ್ಐ ನೇಮಕಾತಿ ಪರೀಕ್ಷಾಅಕ್ರಮ: ಪ್ರಕರಣದ ಕಿಂಗ್‌ಪಿನ್ 18 ದಿನಗಳ ಪಯಣ ಹೇಗಿತ್ತು ಗೊತ್ತಾ?