ಕಲಬುರಗಿ: ಕೊರೊನಾ ಬಗ್ಗೆ ಭಾಷಣ ಸಾಕು, ಪರಿಹಾರ ಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ತಾವಿರುವ ಸ್ಥಳದಿಂದಲೇ ಪ್ರತಿಭಟನೆ ಮಾಡಿದ್ದಾರೆ.
ಭಾರತ ಲಾಕ್‌ಡೌನ್ ನಿಷೇಧಾಜ್ಞೆ ಇರುವ ಹಿನ್ನೆಲೆ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ, ಮುಖಂಡ ಶರಣಬಸಪ್ಪ ಮಮಶೇಟ್ಟಿ ತಾವಿರುವ ಸ್ಥಳದಿಂದಲೇ ಪ್ರತಿಭಟನೆ ಮಾಡಿದರು. ಹೌಸಿಂಗ್ ಬೋರ್ಡ್ ಕಾಲೋನಿಯ ತಮ್ಮ ನಿವಾಸದ ಎದುರು ಕುಟುಂಬದ ಸದಸ್ಯರೊಂದಿಗೆ ಮಾನ್ಪಡೆ ಪ್ರತಿಭಟನೆ ನಡೆಸಿದರು. ಶರಣಬಸಪ್ಪ ಮಮಶೆಟ್ಟಿ ಹೊಲವೊಂದರಲ್ಲಿ ನಿಂತು ಪ್ರತಿಭಟನೆ ನಡೆಸಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಂಡು ವಿಶಿಷ್ಟವಾಗಿ ಪ್ರತಿಭಟಿಸುವ ಮೂಲಕ ಸರ್ಕಾರಕ್ಕೆ ಆಗ್ರಹಿಸಿದರು.
ಭಾಷಣ ನಿಲ್ಲಿಸಿ ಕೆಲಸ ಮಾಡಿ ತಪಾಸಣೆ ತ್ವರಿತಗೊಳಿಸಿ, ಲಾಕ್ಡೌನ್ನಿಂದ ನಷ್ಟವಾದ ರೈತರಿಗೆ ಪರಿಹಾರ, ಸ್ವಾಮಿನಾಥನ್ ವರದಿ ಜಾರಿ, ಅಗತ್ಯವಿರುವವರಿಗೆ ಉಚಿತ ಆಹಾರ ಧಾನ್ಯ ಪೂರೈಕೆ, ಆದಾಯ ಕಡಿಮೆ ಇರುವವರಿಗೆ 7500 ರೂಪಾಯಿ ನಗದು ವರ್ಗಾವಣೆ, ವಲಸೆ ಕಾರ್ಮಿಕರಿಗೆ ಮನೆಗಳಿಗೆ ವಾಪಸಾಗಲು ಅವಕಾಶ ಮಾಡಿಕೊಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.