ಕಲಬುರಗಿ: ರಾಜ್ಯದ ಹಿಜಾಬ್, ಕೇಸರಿ ಶಾಲು ವಿವಾದ ತೀವ್ರತೆ ಪಡೆದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಹಿಜಾಬ್ ಬೆಂಬಲಿಸಿ ಜೇವರ್ಗಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ.
ಜೇವರ್ಗಿ ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ರ‍್ಯಾಲಿ ಮಾಡಲಾಗುತ್ತಿದೆ. ಈ ಪ್ರತಿಭಟನೆಯಲ್ಲಿ ಹಿಜಾಬ್ ಧರಿಸಿದ ಸಾವಿರಕ್ಕೂ ಅಧಿಕ ಮುಸ್ಲಿಂ ಮಹಿಳೆಯರು ಭಾಗಿಯಾಗಿದ್ದಾರೆ. ನ್ಯಾಯಕ್ಕಾಗಿ ಹೋರಾಟ, ಹಿಜಾಬ್ ನಮ್ಮ ಹಕ್ಕು, ನಮ್ಮ ಹಕ್ಕು ನಮಗೆ ಬೇಕೆ ಬೇಕು ಅಂತ ಘೋಷಣೆ ಕೂಗುತ್ತಾ ರ‍್ಯಾಲಿ ಮಾಡಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ..
ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಪ್ರತಿಕ್ರಿಯೆ: ಹಿಜಾಬ್ ಹಾಕಿದ್ರೆ ತಪ್ಪಿಲ್ಲ. ತಮ್ಮ ಧರ್ಮ ಹೇಳುವಂತೆ ಮೈತುಂಬ ಬಟ್ಟೆ ಧರಿಸೋದು ತಪ್ಪಾ? ಬಿಜೆಪಿಯವರು ತಮ್ಮ ವೈಫಲ್ಯ ಮುಚ್ಚಿಕೊಳ್ಳೋಕೆ ಈ ವಿಷಯ ಇಟ್ಟುಕೊಂಡು ಕೋಮು ಸಂಘರ್ಷ ತಂದಿಟ್ಟಿದ್ದಾರೆಂದು ಸರ್ಕಾರದ ವಿರುದ್ಧ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ಕಲಬುರಗಿಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ಧರಿಸುವುದನ್ನು ಸಮರ್ಥಿಸಿಕೊಂಡರು. ಹಿಜಾಬ್ ಹೆಸರಿನಲ್ಲಿ ಹಿಂಸೆ, ಕೋಮುವಾದ ಹೀಗೆ ಮುಂದುವರಿದರೆ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರೋದು ಉತ್ತಮ ಎಂದು ಅಭಿಪ್ರಾಯಪಟ್ಟರು.
ಹಿಜಾಬ್ಗೆ ವಿರೋಧವಾಗಿ ಕೇಸರಿ ಶಾಲು: ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಅನಾವಶ್ಯಕವಾಗಿ ಹಿಜಾಬ್ ವಿವಾದ ನಡೆಯುತ್ತಿದೆ. ಹಿಜಾಬ್ಗೆ ವಿರೋಧವಾಗಿ ಕೇಸರಿ ಶಾಲು ಹಾಕಿ ವಿದ್ಯಾರ್ಥಿಗಳನ್ನು ಕಾಲೇಜ್ಗೆ ಕಳುಹಿಸುವ ಕೆಲಸ ಆಗ್ತಿದೆ. ಹಿಜಾಬ್ ಹೊಸದಲ್ಲ, ಆದ್ರೆ ಕೇಸರಿ ಶಾಲು ಹೊಸದು. ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಜನಪರ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಶಿಸ್ತಿನ ಪಕ್ಷ ಅಂತ ಹೇಳಿಕೊಳ್ಳುವ ಬಿಜೆಪಿಯಲ್ಲಿ ಒಬ್ಬೊಬ್ಬರು ಒಂದೊಂದು ತರಹ ಮಾತನಾಡುತ್ತಾರೆ. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೋಮು ಸಂಘರ್ಷ ತಂದಿಟ್ಟಿದ್ದಾರೆ ಎಂದು ದೂರಿದರು.
ಜನರ ತಲೆಯಲ್ಲಿ ಜಾತಿ, ಧರ್ಮದ ನಶೆಯನ್ನು ಬಿಟ್ಟಿದ್ದಾರೆ. ಶಿವಮೊಗ್ಗದಲ್ಲಿ ಕೇಸರಿ ಧ್ವಜ ಹಾರಿಸಿದ್ದಾರೆ. ಹಲವು ಸಚಿವರು ಇದನ್ನು ಬೆಂಬಲಿಸುತ್ತಿದ್ದಾರೆ. ಆರ್‌ಎಸ್ಎಸ್ ಕಪಿಮುಷ್ಟಿಯಲ್ಲಿ ಸಿಲುಕಿರುವ ಮುಖ್ಯಮಂತ್ರಿಯವರು ಏನನ್ನು ಮಾತಾಡುವ ಸ್ಥಿತಿಯಲ್ಲಿಲ್ಲ ಎಂದರು.
ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಟ್ವೀಟ್ ಮಹಿಳೆಯರನ್ನು ಅವಮಾನಿಸುವಂಥದ್ದು: ಪ್ರಮೋದ್ ಮುತಾಲಿಕ್
ಪಾಕಿಸ್ತಾನಕ್ಕೆ ಹೋಗಿ ಎಂಬ ಸಂಸದ ಪ್ರತಾಪ ಸಿಂಹ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಪ್ರತಾಪ್ ಸಿಂಹನಿಗೆ ಕಾಮನ್ ಸೆನ್ಸ್ ಇಲ್ಲ ಅಂತ ಟೀಕಿಸಿದರು. ನಮ್ಮ ದೇಶದಲ್ಲಿ ಬಾಳಿ ಬದುಕಿದವರು ಅದೇಗೆ ಪಾಕಿಸ್ತಾನಕ್ಕೆ ಹೋಗೋಕೆ ಆಗುತ್ತೆ, ಕೇವಲ ಟಿವಿ, ಪೇಪರ್ನಲ್ಲಿ ಹೆಸರು ಬರುವ ಸಲುವಾಗಿ ಇಲ್ಲಸಲ್ಲದ್ದನ್ನು ಮಾತನಾಡುತ್ತಾರೆ. ಮಾಧ್ಯಮದವರು ಎರಡು ತಿಂಗಳು ಅವರ ಹೆಸರು ಹಾಕಬೇಡಿ. ಆಗ ನೋಡಿ ಅವರು ತುಟಿ ಬಿಚ್ಚುವದಿಲ್ಲ ಎಂದು ಟೀಕಿಸಿದರು.
ಹಿಂದು ವಿದ್ಯಾರ್ಥಿನಿಯರು ಬುರ್ಕಾ ಧರಿಸೋಕೆ ಆಗುತ್ತಾ? ಮಕ್ಕಳ ಮನಸಲ್ಲಿ ಈಗಲೇ ಕೋಮುವಾದ ಸೃಷ್ಟಿಸೋಕೆ ಕೆಲವರು ಮುಂದಾಗಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಶಾಲೆಯ ಡ್ರೆಸ್ ಕೋಡ್ ಅನ್ನು ತಾವೇ ನಿರ್ಧಾರ ಮಾಡುವಂತೆ ಸರ್ಕಾರ ಹೇಳಿದೆ. ಹಾಗಾದರೆ ಮುಸ್ಲಿಂ ಶಿಕ್ಷಣ ಸಂಸ್ಥೆಗಳು ಬುರ್ಖಾ ಕಡ್ಡಾಯ ಮಾಡ್ತಾರೆ.
ಮುಸ್ಲಿಂ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡೋ ಹಿಂದು ವಿದ್ಯಾರ್ಥಿನಿಯವರು ಬುರ್ಕಾ ಧರಿಸಿಕೊಂಡು ಹೋಗಬೇಕಾ?, ಹೋಗ್ತಾರಾ. ಸಿಖ್ ಹುಡುಗರು ಟರ್ಬನ್ ತೆಗೆಯಬೇಕು ಅಂತಾ ಹೇಳುವ ಧೈರ್ಯ ಮುಖ್ಯಮಂತ್ರಿಗೆ ಇದೇಯಾ? ಲಿಂಗಾಯತರು ವಿಭೂತಿ ಹಾಕಬೇಡಿ ಅಂತ ಹೇಳುವ ಸಾಹಸಕ್ಕೆ ಸಿಎಂ ಮುಂದಾಗ್ತಾರಾ ಅಂತ ಕಿಡಿಕಾರಿದರು.