ಕಲಬುರಗಿ: ಮಾಜಿ ಪ್ರಧಾನಿ ನೆಹರು ಅವರ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾತಾಡುವುದರಿಂದ ನೆಹರು ಅವರ ಘನತೆ ಏನೂ ಕಡಿಮೆ ಆಗುವುದಿಲ್ಲ. ಹಾಗೆಯೇ ನಾನು ವಾಜಪೇಯಿ ಅವರ ಬಗ್ಗೆ ಮಾತಾಡುವುದರಿಂದ ವಾಜಪೇಯಿ ಘನತೆ ಸಹ ಕಡಿಮೆ ಆಗುವುದಿಲ್ಲ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ನೆಹರು ಬಗ್ಗೆ ಸಿ.ಟಿ. ರವಿ ಕೇವಲವಾಗಿ ಮಾತನಾಡಿದ್ದಾರೆ ಎಂದು ಕಿಡಿಕಾರಿದರು. ನೀವು ಎಲ್ಲಾ ಬಾರ್ಗಳಿಗೂ ವಾಜಪೇಯಿ ಬಾರ್ ಅಂತಾ ಬೋರ್ಡ್ ಹಾಕುತ್ತೀರಾ? ಎಂದು ಶಾಸಕ ಪ್ರಿಯಾಂಕ್ ಖರ್ಗೆ ಸಿ.ಟಿ. ರವಿಗೆ ತಿರುಗೇಟು ನೀಡಿದರು.
ಬಿಜೆಪಿಯಲ್ಲಿರುವ ಎಲ್ಲರೂ ಸಾಚಾಗಳು ಅಂತಾ ಭಾವಿಸಬೇಕಾ?, ಸಿಡಿ ಪ್ರಕರಣದಿಂದ ದೇಶದಲ್ಲೇ ಮರ್ಯಾದೆ ಹೋಗಿದೆ. ಬಿಜೆಪಿಯವರು ಗೋಡ್ಸೆಯನ್ನು ನಂಬುತ್ತಾರೆ, ಗಾಂಧಿಯನ್ನು ನಂಬುವುದಿಲ್ಲ. ಇತಿಹಾಸ ಗೊತ್ತಿಲ್ಲದವರು ಮಂತ್ರಿಯಾದ್ರೆ ಹೀಗೆ ಮಾತನಾಡುವುದು. ಇದು ಅವಿವೇಕಿತನದ ಪರಮಾವಧಿ ಇದು ಎಂದು ಪ್ರಿಯಾಂಕ್ ಖರ್ಗೆ ಸಿ ಟಿ ರವಿ ಅವರ ಹೇಳಿಕೆಯನ್ನು ಖಂಡಿಸಿದರು.