ಕಲಬುರಗಿ : ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಬಂಧಿತರಾದ ಐಪಿಎಸ್ ಅಧಿಕಾರಿ ಅಮೃತ್ ಪಾಲ್ ಕೇವಲ ಸೇಫ್ಟಿ ಪಿನ್. ಮೂಲ ಕಿಂಗ್‌ಪಿನ್‌ಗಳು ಯಾರು? ಸರ್ಕಾರ ಪ್ರಭಾವಿಗಳನ್ನು ರಕ್ಷಿಸಲು ಅಮೃತ್ ಪಾಲ್ ಅವರನ್ನ ಬಂಧಿಸಲಾಗಿದೆ ಅಂತ ಶಾಸಕ ಪ್ರಿಯಾಂಕ್ ಖರ್ಗೆ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.
ನಗರದಲ್ಲಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ವಿಧಾನಸೌದದ ಮೂರನೇ ಮಹಡಿಯಲ್ಲಿನ ಅನೇಕರು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಮಾಜಿ ಸಿಎಂ ಅವರ ಕ್ಯಾಂಡಿಡೇಟ್ಸ್ ಎಷ್ಟು? ಅವರ ಮಗನ ಕ್ಯಾಂಡಿಡೇಟ್ಸ್ ಎಷ್ಟು? ಅಂದಿನ ಗೃಹ ಸಚಿವರ ಕ್ಯಾಂಡಿಡೇಟ್ಸ್ ಎಷ್ಟು ಇದ್ರು ಎಲ್ಲಾ ಹೊರಗೆ ಬರಬೇಕಲ್ವಾ? ನೀವು ಭ್ರಷ್ಟರು ಆಗಿರದಿದ್ರೆ ಪಿಎಸ್ಐ ಹಗರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿ ಎಂದು ಸವಾಲು ಎಸೆದರು.
ಸದನದಲ್ಲಿ ಗೃಹ ಸಚಿವರನ್ನು ಪಿಎಸ್ಐ ಅಕ್ರಮದ ಬಗ್ಗೆ ಕೇಳಿದಾಗ ನಡೆದೇ ಇಲ್ಲ ಎಂದು ಆರೋಪವನ್ನು ತಳ್ಳಿಹಾಕಿದ್ದರು. ಹಾಗಾದರೆ ಎಡಿಜಿಪಿ ಸೇರಿದಂತೆ ಸುಮಾರು 60 ಜನ ಅಧಿಕಾರಿಗಳು ಹಾಗೂ ಇತರರು ಅರೆಸ್ಟ್ ಆಗಿದ್ದಾರೆ. ಗೃಹ ಸಚಿವರು ಈಗೇನು ಹೇಳುತ್ತಾರೆ ಎಂದರು.
ಕಾಂಗ್ರೆಸ್ ಪಕ್ಷ ರಿಜೆಕ್ಟೆಡ್ ಪಕ್ಷ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿಕೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ಸ್ವತಃ ಈಶ್ವರಪ್ಪನವರೇ ರಿಜೆಕ್ಟೆಡ್ ಆಗಿದ್ದಾರೆ. ಗುತ್ತಿಗೆದಾರರ ಕಮೀಷನ್ ಕೇಸಲ್ಲಿ ಏನೂ ನಡೆದೇ ಇಲ್ಲ ಅಂದಿದ್ದ ಅವರೇ ರಾಜೀನಾಮೆ ನೀಡಿದರಲ್ಲ ಎಂದು ಕುಟುಕಿದರು. ಮಹಾರಾಷ್ಟ್ರ ಸೇರಿದಂತೆ ಬಹುತೇಕ ಕಡೆ ಬಿಜೆಪಿ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬಂದಿಲ್ಲ. ಶಾಸಕರನ್ನೇ ಖರೀದಿ ಮಾಡಿ ಸರ್ಕಾರ ರಚನೆ ಮಾಡಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ: ಸಿದ್ದರಾಮೋತ್ಸವ ಆಯೋಜನೆಗೆ ಕೆ.ಎಸ್.ಈಶ್ವರಪ್ಪ ವಿರೋಧ.. ಇದೆಂಥಾ ದುಃಸ್ಥಿತಿ ಎಂದು ವ್ಯಂಗ್ಯ