ಸೇಡಂ: ಕೊರೊನಾ ತಡೆಯುವ ನಿಟ್ಟಿನಲ್ಲಿ ಸರ್ಕಾರದ ಜೊತೆ ಕೈಜೋಡಿಸಿ ಕೆಲಸ ಮಾಡುತ್ತಿದ್ದ ಖಾಸಗಿ ಆಯುಷ್ ವೈದ್ಯರು ತಮ್ಮ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಕೆಲಸದಿಂದ ಹಿಂದೆ ಸರಿದಿದ್ದು, ಕೋವಿಡ್ ಪತ್ತೆಗೆ ಹೊಡೆತ ಬಿದ್ದಂತಾಗಿದೆ.
ಸದಾಕಾಲ ಸರ್ಕಾರಿ ವೈದ್ಯರೊಂದಿಗೆ ಸೋಂಕಿತರನ್ನು ನಿಗದಿತ ಆಸ್ಪತ್ರೆಗೆ ರವಾನಿಸುವುದು, ಪ್ರಾಥಮಿಕ ಸಂಪರ್ಕಿತರ ಪತ್ತೆ ಹಚ್ಚುವುದೂ ಸೇರಿದಂತೆ ಅನೇಕ ರೀತಿಯಲ್ಲಿ ಖಾಸಗಿ ಆಯುಷ್ ವೈದ್ಯರು ಸರ್ಕಾರಕ್ಕೆ ನೆರವಾಗಿದ್ದರು. ಆದರೀಗ ಸೇವೆ ತಿರಸ್ಕರಿಸಿ ಮುಷ್ಕರಕ್ಕೆ ಇಳಿದಿರುವುದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.
ಈ ಕುರಿತು ಆಯುಷ್ ಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಡಾ. ನರಸಿಂಹರೆಡ್ಡಿ ಮಾತನಾಡಿ, ಆಯುಷ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಡಾ. ಮೋಹನರೆಡ್ಡಿ ರುದ್ರವಾರ, ಡಾ. ಪ್ರವೀಣ ಜೋಶಿ ಜಂಟಿ ಸುದ್ದಿಗೋಷ್ಠಿ ನಡೆಸಿದ್ದು, ಸರ್ಕಾರಿ ಆಯುಷ್ ವೈದ್ಯರ ಸಂಬಳ ಹೆಚ್ಚಿಸಬೇಕು. ಸೇವಾ ಭದ್ರತೆ ಕಲ್ಪಿಸಬೇಕು ಹಾಗೂ ಅಲೋಪಥಿಕ್ ಅಭ್ಯಾಸ ಮಾಡಲು ಅನುಮತಿ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಆಯುಷ್ ವೈದ್ಯರು ಎನ್ಆರ್ಹೆಚ್ಎಮ್ ಯೋಜನೆಯಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕೇವಲ 20,000 ರೂ. ವೇತನ ನೀಡಲಾಗುತ್ತಿದೆ. ಆದರೆ ಡಿ ಗ್ರೂಪ್ ನೌಕರರಿಗೆ ವೇತನ ಇನ್ನೂ ಜಾಸ್ತಿ ಇದೆ. ಪೋಲಿಯೊದಿಂದ ಹಿಡಿದು ಗರ್ಭಿಣಿಯರ ನೋಂದಣಿಯವರೆಗಿನ ಕಾರ್ಯಗಳ ಜೊತೆಗೆ ತುರ್ತು ಪರಿಸ್ಥಿತಿಯಲ್ಲೂ ಸಹ ಸೇವೆ ನಿರ್ವಹಿಸುತ್ತಿದ್ದು, ಇಲ್ಲಿಯವರೆಗೂ ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ.
ಸತತ ಮೂರು ತಿಂಗಳಿಂದ ವೇತನ ನೀಡಿಲ್ಲ. ಕೊರೊನಾದಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಸಹ ಜೀವದ ಹಂಗು ತೊರೆದು ಕಾರ್ಯಗತರಾಗಿದ್ದೇವೆ. ಸರ್ಕಾರ ಕೆಲಸಕ್ಕೆ ಕೈ ಜೋಡಿಸಿದ್ದರೂ ಸಹ ಸರ್ಕಾರ ಮಾತ್ರ ಆಯುಷ್ ವೈದ್ಯರನ್ನು ನಿರ್ಲಕ್ಷಿಸುತ್ತಿದೆ. ಅಲ್ಲದೆ ಕ್ರಿಮಿನಲ್ ಕೇಸ್ ಹಾಕುವ ಬೆದರಿಕೆ ಒಡ್ಡುತ್ತಿದೆ. ಅದಕ್ಕಾಗಿ ಮನನೊಂದು ಜುಲೈ 15 ರಿಂದ ಸೇವೆ ಬಹಿಷ್ಕರಿಸಿ ಹೋರಾಟಕ್ಕೆ ಇಳಿದಿದ್ದೇವೆ.
ಕೂಡಲೇ ಮುಖ್ಯಮಂತ್ರಿಗಳು ಹರ್ಯಾಣ ಮಾದರಿಯಲ್ಲಿ 56,500 ವೇತನ, ಸೇವಾ ಭದ್ರತೆ ಕಲ್ಪಿಸಬೇಕು. ಹಾಗೂ ಆಯುಷ ವೈದ್ಯರು ಅಲೋಪಥಿಕ್ ಅಭ್ಯಾಸಕ್ಕೆ ಅನುಮತಿ ನೀಡಬೇಕು ಎಂದು ಅವರು ಆಗ್ರಹಿಸಿದರು. ಕೂಡಲೇ ಈ ಕುರಿತು ಕ್ರಮ ಕೈಗೊಳ್ಳದೇ ಇದ್ದಲ್ಲಿ ಬರುವ ದಿನಗಳಲ್ಲಿ ಸಾಮೂಹಿಕ ರಾಜಿನಾಮೆ ನೀಡುವುದಾಗಿ ಎಚ್ಚರಿಸಿದರು.