ಕಲಬುರಗಿ: ಬಡ ಮಕ್ಕಳು ಹಸಿವಿನಿಂದ ಬಳಲುವುದನ್ನು ತಪ್ಪಿಸಲು ಸರ್ಕಾರ ಅಂಗನವಾಡಿಗಳ ಮೂಲಕ ಉಚಿತವಾಗಿ ಅಕ್ಕಿ ನೀಡುತ್ತಿದೆ. ಆದರೆ, ವಾಡಿ ಪಟ್ಟಣದ ವಿವಿಧ ಅಂಗನವಾಡಿ ಕೇಂದ್ರಗಳಿಗೆ ಪೂರೈಸಲಾಗುತ್ತಿರುವ ಅಕ್ಕಿಯೊಂದಿಗೆ ಪ್ಲಾಸ್ಟಿಕ್ ಅಕ್ಕಿ ಕಲಬೆರಕೆ ಮಾಡಿ ಸರಬರಾಜು ಮಾಡಲಾಗುತ್ತಿದೆ ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ.
ಕಲಬುರಗಿ ಜಿಲ್ಲೆಯ ವಾಡಿ ಪಟ್ಟಣದ ಬಹುತೇಕ ಅಂಗನವಾಡಿಗಳಲ್ಲಿ ನೀಡುತ್ತಿರುವ ಅಕ್ಕಿಯಲ್ಲಿ ಕಲಬೆರಕೆ ಇದೆ. ಪ್ಲಾಸ್ಟಿಕ್ ಅಕ್ಕಿ ಸೇರಿಸಿ ಬಡ ಮಕ್ಕಳ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ವಾಡಿ ಪುರಸಭೆ ವ್ಯಾಪ್ತಿಯ ವಾರ್ಡ್ 6 ರ ಜಾಂಬವೀರ ಕಾಲೋನಿಯ ದಲಿತ ಕುಟುಂಬಗಳ ಮನೆಯಲ್ಲಿ ಅನ್ನ ಬೇಯಿಸುವಾಗ ಈ ಪ್ಲಾಸ್ಟಿಕ್ ಅಕ್ಕಿಗಳು ಪೋಷಕರ ಕಣ್ಣಿಗೆ ಬಿದ್ದಿದೆ. ಸರ್ಕಾರ ನಮ್ಮ ಮಕ್ಕಳ ಹಸಿದ ಹೊಟ್ಟೆಗೆ ವಿಷ ಕೊಟ್ಟಿದೆ ಎಂದು ಗುಡುಗಿದ ಸ್ಥಳೀಯರು, ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಕೂಡಲೇ ಸರ್ಕಾರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುವಂತೆ ಆಗ್ರಹಿಸಿದ್ದಾರೆ.