ಕಲಬುರಗಿ: ಇನ್ನೊಬ್ಬರನ್ನು ನಗಿಸುತ್ತ ಅವರ ಫೋಟೋಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದು ಸಾವಿರಾರು ವರ್ಷಗಳ ಕಾಲ ನೆನಪು ಮಾಸದಂತೆ ಉಳಿಯುವಂತೆ ಮಾಡುವ ಛಾಯಾಗ್ರಾಹಕರು ಲಾಕ್ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸದ್ಯ ಲಾಕ್ಡೌನ್ ಕೊಂಚ ಸಡಿಲಿಕೆ ಮಾಡಲಾಗಿದೆಯಾದರೂ ಸರ್ಕಾರದಿಂದ ಸಭೆ ಸಮಾರಂಭಗಳಿಗೆ ನಿಷೇಧ ಹೇರಲಾಗಿದೆ. ಈ ‘ಲಾಕ್ ಡೌನ್’ ನಿಂದಾಗಿ ಕಲಬುರಗಿ ಜಿಲ್ಲೆಯ ಛಾಯಾಗ್ರಾಹಕರ ಬದುಕು ಬೀದಿಪಾಲಾಗಿದೆ. ಕೊರೊನಾ ವೈರಸ್ ಕಲಬುರಗಿಯಲ್ಲಿಯೇ ಮೊದಲು ಬಲಿ ಪಡೆಯಿತು. ಅಲ್ಲಿಂದ ಇಲ್ಲಿ ತನಕವೂ ಜನರು ಒಂದಿಲ್ಲೊಂದು ಸಂಕಷ್ಟಗಳಲ್ಲಿಯೇ ಜೀವನ ಕಳೆಯುತ್ತಿದ್ದಾರೆ. ಅದರಲ್ಲಿ ನಿತ್ಯ ದುಡಿದು ತಿನ್ನುತ್ತಿದ್ದ ಛಾಯಾಗ್ರಾಹಕರು ಬದುಕಿಗಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ಕೊನೆಯವರೆಗೂ ಮದುವೆ, ನಿಶ್ಚಿತಾರ್ಥ, ನಾಮಕರಣ ಕಾರ್ಯಕ್ರಮ ಇರೋದು ಇದೇ ಮೂರು ತಿಂಗಳು. ಇದಲ್ಲದೇ ಕೆಲವು ಸರಕಾರಿ ಕಾರ್ಯಕ್ರಮಗಳು ಇರುತ್ತಿದ್ದವು. ಈ ಮೂರು ತಿಂಗಳಲ್ಲಿಯೇ ಅವರು ವರ್ಷಕ್ಕೆ ಆಗುವಷ್ಟು ದುಡಿಯುತ್ತಿದ್ದರು. ಆದರೀಗ ಕೊರೊನಾ ಮಹಾಮಾರಿ ಅವರ ಅವರ ಬದುಕನ್ನೇ ಹಾಳು ಮಾಡಿದೆ. ಕಳೆದ ಒಂದು ತಿಂಗಳಿಂದ ಯಾವುದೇ ವ್ಯವಹಾರ ಇಲ್ಲದೇ ಇರೋದ್ರಿಂದ ಜೀವನ ನಡೆಸುವುದಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಛಾಯಾಗ್ರಾಹಕ ವೃತ್ತಿಯನ್ನೆ ಜೀವನಾಧಾರ ಮಾಡಿಕೊಂಡ ಜಿಲ್ಲೆಯ ಸಾವಿರಾರು ಜನ ಇದ್ದಾರೆ.
ಜಿಲ್ಲೆಯಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನ ಛಾಯಾಗ್ರಾಹಕರಿದ್ದಾರೆ. ಸಂಕಷ್ಟದಲ್ಲಿರುವ ಛಾಯಾಗ್ರಹಕರ ಕುಟುಂಬಗಳಿಗೆ ಸರಕಾರ ಆಸರೆಯಾಗಬೇಕು ಎನ್ನುವ ಮನವಿ ಛಾಯಾಗ್ರಾಹಕರದ್ದಾಗಿದೆ. ಅದಕ್ಕೆ ಸರಕಾರ ಯಾವ ರೀತಿ ಸ್ಪಂದಿಸುತ್ತೆ ಎನ್ನೋದನ್ನು ಕಾದುನೋಡಬೇಕಷ್ಟೇ!