ಕಲಬುರಗಿ: ನಗರದಲ್ಲಿ ಮತ್ತೆ ನೆತ್ತರು ಹರಿದಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವಂತಹ ಘಟನೆ ನಗರದ ರಾಣೇಶಪೀರ ದರ್ಗಾದ ಎಸ್‌ಎಮ್ ಕೃಷ್ಣ ಕಾಲೋನಿಯಲ್ಲಿ ನಡೆದಿದೆ. ಈ ಘಟನೆಯಿಂದ ಕಲಬುರಗಿಯ ಜನರು ಬೆಚ್ಚಿಬಿದ್ದಿದ್ದಾರೆ. ಪಂಡಿತ್ ದಿನಾ ದಯಾಳ್ ಕಾಲೋನಿ ನಿವಾಸಿ 22 ವರ್ಷದ ಪಾಪ್ಯಾ ಅಲಿಯಾಸ್ ಉಮಾಕಾಂತ್ ಕೊಲೆಗೀಡಾದ ಯುವಕ.
ಉಮಾಕಾಂತ್ ಎಂದಿನಂತೆ ಬೈಕ್ ಮೇಲೆ ಮನೆಗೆ ತೆರಳುತ್ತಿದ್ದನು. ರಾಣೇಶಪೀರ್ ದರ್ಗಾದ ಎಸ್‌ಎಮ್ ಕೃಷ್ಣ ಕಾಲೋನಿ ಬಳಿ ಬೈಕ್ ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡvಒಂದು ಉಮಾಕಾಂತ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಕೆಳಗೆ ಬಿದ್ದ ಪಾಪ್ಯಾನ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮೃತ ದೇಹವನ್ನು ವಶಕ್ಕೆ ಪಡೆದ ಪೊಲೀಸರು, ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರಗೆ ರವಾನಿಸಿದರು. ಬಳಿಕ ಘಟನಾ ಸ್ಥಳವನ್ನು ಪರಿಶೀಲನೆ ನಡೆಸಿದರು.
ಓದಿ: ಚಂದ್ರು ಹತ್ಯೆ ಪ್ರಕರಣವನ್ನು ಈಗಾಗಲೇ ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ : ಸಿಎಂ ಬೊಮ್ಮಾಯಿ
ಈ ಕುರಿತು ಸಬ್ ಅರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಈ ಕೊಲೆ ಮಾಡಿದವರು ಯಾರು, ಯುವಕನ ಹತ್ಯೆಗೆ ನಿಖರ ಕಾರಣ ಏನು ಬಗ್ಗೆ ಎಂಬುದರ ಬಗ್ಗೆ ಪೊಲೀಸ್ ತನಿಖೆ ನಂತರ ಮಾಹಿತಿ ಲಭ್ಯವಾಗಲಿದೆ.