ಕಲಬುರಗಿ: ಮಹಾಮಾರಿ ಕೊರೊನಾ ಸೋಂಕಿಗೆ ಒಂದೇ ದಿನ ತಾಯಿ ಮತ್ತು ಮಗ ಇಬ್ಬರು ಬಲಿಯಾಗಿರುವ ಮನಕಲುಕುವ ಘಟನೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ. ವಾಡಿ ಪಟ್ಟಣದ ಆರ್‌ಸಿ ತಾಂಡಾ ನಿವಾಸಿಗಳಾಗಿದ್ದ ಚಾಂದಿಬಾಯಿ ನಾಯಕ್ (74) ಹಾಗೂ ಆಕೆಯ ಕಿರಿಯ ಪುತ್ರ ಭಜನ್ ನಾಯಕ್ (32) ಕ್ರೂರಿ ಕೊರೊನಾಗೆ ಇಂದು ಬಲಿಯಾಗಿದ್ದಾರೆ.
ಓದಿ: ದೂರದ ಗಲ್ಫ್ ದೇಶದ ಛಾಯಾಚಿತ್ರಗಳ ಸ್ಪರ್ಧೆಯಲ್ಲಿ KEB ನೌಕರನಿಗೆ ಒಲಿದ ಚಿನ್ನ
ತಾಯಿ-ಮಗ ಇಬ್ಬರು ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಮಗ ಭಜನ್ ಮೃತಪಟ್ಟರೆ, ಸಾಯಂಕಾಲ ತಾಯಿ ಚಾಂದಿಬಾಯಿ ಸಾವನ್ನಪ್ಪಿದ್ದಾರೆ.
ಇದಲ್ಲದೇ ಕಳೆದ ಒಂಬತ್ತು ದಿನಗಳ ಹಿಂದಷ್ಟೆ ಚಾಂದಿಬಾಯಿ ಅವರ ಹಿರಿಯ ಪುತ್ರ, ವಾಡಿ ಪುರಸಭೆ ಸದಸ್ಯ ಪ್ರಕಾಶ್ ನಾಯಕ್ (46) ಸಹ ಕೊರೊನಾಗೆ ಬಲಿಯಾಗಿದ್ದರು. ಅಲ್ಲದೇ ಇನ್ನೊರ್ವ ಪುತ್ರ ಮಹೇಶ್ ನಾಯಕ್ ಎಂಬುವರು ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೇ ಕುಟುಂಬದಲ್ಲಿ ಮೂವರು ಕೊರೊನಾಗೆ ಬಲಿಯಾದಂತಾಗಿದ್ದು, ಮತ್ತೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಡೀ ಕುಟುಂಬ ದುಃಖದ ಮಡುವಿನಲ್ಲಿ ಮುಳುಗಿದೆ.